ADVERTISEMENT

ಹರಿಯಾಣ ಶಾಸಕ ಕುಲದೀಪ್ ಬಿಷ್ಣೋಯಿ ರಾಜೀನಾಮೆ: ನಾಳೆ ಬಿಜೆಪಿಗೆ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2022, 12:54 IST
Last Updated 3 ಆಗಸ್ಟ್ 2022, 12:54 IST
ಹರಿಯಾಣ ಶಾಸಕ ಕುಲದೀಪ್ ಬಿಷ್ಣೋಯಿ
ಹರಿಯಾಣ ಶಾಸಕ ಕುಲದೀಪ್ ಬಿಷ್ಣೋಯಿ   

ಚಂಡೀಗಡ: ಹರಿಯಾಣದ ಕಾಂಗ್ರೆಸ್‌ ಶಾಸಕ ಕುಲದೀಪ್‌ ಬಿಷ್ಣೋಯಿ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ. ನಾಳೆ (ಗುರುವಾರ) ಬಿಜೆಪಿ ಸೇರಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿಧಾನಸಭೆ ಸ್ಪೀಕರ್‌ಗಿಯಾನ್ ಚಂದ್ ಗುಪ್ತಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಆದಂಪುರ ಕ್ಷೇತ್ರದ ಶಾಸಕರಾಗಿದ್ದ ಕುಲದೀಪ್‌, ಕಳೆದ ರಾಜ್ಯಸಭಾ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ನಂತರದ ದಿನಗಳಲ್ಲಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಜೊತೆಗಿದ್ದ ಚಿತ್ರವನ್ನು ತಮ್ಮ ಟ್ವಿಟರ್‌ ಖಾತೆಯಿಂದ ತೆಗೆದುಹಾಕಿದ್ದರು.

ADVERTISEMENT

ಹರಿಯಾಣ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆಮಾಡಲಿಲ್ಲ ಎಂದು ಮುನಿಸಿಕೊಂಡಿದ್ದ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.

ಕಳೆದ ತಿಂಗಳುಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಶೀಘ್ರವೇ ಬಿಜೆಪಿ ಸೇರುವೆ ಎಂದು ಹೇಳಿದ್ದರು.

ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿದ್ದ ಬಿಷ್ಣೋಯಿ ಅವರು ಗುರುವಾರ ಬಿಜೆಪಿ ಸೇರುವುದು ಖಚಿತವಾಗಿದೆ ಎಂದು ಹರಿಯಾಣ ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.