ಶೀತಲ್ ಅಲಿಯಾಸ್ ಸಿಮ್ಮಿ
ಚಂಡೀಗಢ: ಹರಿಯಾಣ ಮೂಲದ ಮಾಡೆಲ್ ಶೀತಲ್ ಅಲಿಯಾಸ್ ಸಿಮ್ಮಿ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸ್ನೇಹಿತ ಸುನಿಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನಿಲ್‌ನನ್ನು ಇಂದು (ಮಂಗಳವಾರ) ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸೋನಿಪತ್‌ನ ಖಾರ್ಖೋಡಾ ಪ್ರದೇಶದ ಕಾಲುವೆಯಲ್ಲಿ ಶೀತಲ್ ಶವ ಸೋಮವಾರ ಪತ್ತೆಯಾಗಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಜೂನ್ 14ರಂದು ಚಿತ್ರೀಕರಣಕ್ಕೆಂದು ಮನೆಯಿಂದ ಹೋಗಿದ್ದ ಶೀತಲ್, ವಾಪಸ್ ಆಗದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಶೀತಲ್ ಶವ ಪತ್ತೆಯಾದ ಸ್ಥಳದಲ್ಲೇ ಸೋನಿಪತ್‌ನ ಇಸ್ರಾನಾ ಮೂಲದ ವ್ಯಕ್ತಿಗೆ ಸೇರಿದ ಕಾರು ಪತ್ತೆಯಾಗಿತ್ತು. ಶೀತಲ್ ಕೊನೆಯದಾಗಿ ಸುನಿಲ್ ಜತೆಗೆ ಕಾಣಿಸಿಕೊಂಡಿದ್ದರು. ಆಕೆಯ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಹಾಗಾಗಿ ಆತನೇ ಶೀತಲ್ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ಮೇಲೆ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.