
ನವದೆಹಲಿ: ‘ಹರಿಯಾಣದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಭಾರಿ ಪ್ರಮಾಣದ ಮತಕಳವು ನಡೆದಿದ್ದು, ಕಾಂಗ್ರೆಸ್‌ನ ಗೆಲುವನ್ನು ಸೋಲಾಗಿ ಪರಿವರ್ತಿಸಲಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
‘ಹರಿಯಾಣದ ಮತದಾರರ ಪಟ್ಟಿಯ ದತ್ತಾಂಶವನ್ನು ಗಮನಿಸಿದರೆ 25 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಸೇರ್ಪಡೆ ಆಗಿರುವುದು ಗೊತ್ತಾಗುತ್ತದೆ. ಚುನಾವಣಾ ಆಯೋಗವು ಬಿಜೆಪಿ ಜತೆ ಕೈಜೋಡಿಸಿ, ಅವರನ್ನು ಗೆಲ್ಲಿಸಿದೆ’ ಎಂದು ದೂರಿದರು.
‘ಬಿಜೆಪಿ ಮತ್ತು ಚುನಾವಣಾ ಆಯೋಗ ಜತೆಗೂಡಿ ಭಾರತದ ಪ್ರಜಾಪ್ರಭುತ್ವವನ್ನು ಕೊಲ್ಲಲು ವ್ಯವಸ್ಥಿತ ಮತಕಳವು ವಿಧಾನವನ್ನು ಅಭಿವೃದ್ಧಿಪಡಿಸಿವೆ. ಇದೀಗ ಬಿಹಾರ ಚುನಾವಣೆಯಲ್ಲೂ ಆಯೋಗ ಇದೇ ಕಾರ್ಯತಂತ್ರ ಅನುಸರಿಸುತ್ತಿದೆ’ ಎಂದು ಅವರು ಆರೋಪ ಮಾಡಿದರು.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಹಿಂದಿನ ದಿನವಾದ ಬುಧವಾರ ‘ಇಂದಿರಾ ಭವನ’ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಶೇ 100ರಷ್ಟು ಪುರಾವೆಗಳೊಂದಿಗೆ ಚುನಾವಣಾ ಆಯೋಗ ಮತ್ತು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇನೆ’ ಎಂದರು. ಅದಕ್ಕೆ ಪೂರಕವಾಗಿ ಹಲವು ಅಂಕಿಅಂಶಗಳು, ದಾಖಲೆಗಳು ಮತ್ತು ಚಿತ್ರಗಳನ್ನು ಅವರು ಪರದೆ ಮೇಲೆ ಪ್ರದರ್ಶಿಸಿದರು.
‘ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಈ ವ್ಯವಸ್ಥಿತ ವಿಧಾನಗಳ ಮೂಲಕವೇ ಫಲಿತಾಂಶವನ್ನು ಕದಿಯಲಾಗಿದೆ. ಇದಕ್ಕೆ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರು ಕಾರಣ. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪಾಲುದಾರರಾಗಿದ್ದು, ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಹರಿಯಾಣದಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅಮಾನ್ಯ ಮತದಾರರು ಮತ್ತು 19.26 ಲಕ್ಷ ‘ಬಲ್ಕ್’ ಮತದಾರರ ಮೂಲಕ 25 ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳವು ಮಾಡಲಾಗಿದೆ’ ಎಂದು ಅವರು ಅಂಕಿಅಂಶ ಸಹಿತ ವಿವರಿಸಿದರು.
ಚುನಾವಣಾ ಆಯೋಗವು ಈ ನಕಲಿ ಮತದಾರರನ್ನು ಪಟ್ಟಿಯಿಂದ ಏಕೆ ತೆಗೆದುಹಾಕುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ‘ಅವರಿಗೆ ನ್ಯಾಯಯುತ ಚುನಾವಣೆಯೇ ಬೇಕಿಲ್ಲ’ ಎಂದು ಕಿಡಿಕಾರಿದರು.
ಮತದಾರರ ಪಟ್ಟಿಯು ಕೊನೆ ಗಳಿಗೆಯಲ್ಲಿ ರಾಜಕೀಯ ಪಕ್ಷಗಳಿಗೆ ದೊರೆಯುತ್ತದೆ. ಆ ಸಂದರ್ಭದಲ್ಲಿ ಮತಕಳವನ್ನು ಪತ್ತೆ ಹಚ್ಚುತ್ತಾ ಸಮಯ ವ್ಯಯ ಮಾಡುವ ಕಾರ್ಯವನ್ನು ಯಾವ ಪಕ್ಷಗಳೂ ಮಾಡುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
‘ಹರಿಯಾಣ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದವು. ಅದಕ್ಕೆ ಪೂರಕವಾಗಿ ಹರಿಯಾಣದಲ್ಲಿ ಮೊದಲ ಬಾರಿಗೆ ಅಂಚೆ ಮತಗಳು ಕಾಂಗ್ರೆಸ್‌ಗೆ ಹೆಚ್ಚಾಗಿ ಚಲಾವಣೆ ಆಗಿದ್ದವು. ಅಂಚೆ ಮತಪತ್ರಗಳ ವಿಚಾರದಲ್ಲಿ ಕಾಂಗ್ರೆಸ್ 73 ಕ್ಷೇತ್ರಗಳಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದರೆ, ಬಿಜೆಪಿ 17 ಸ್ಥಾನಗಳಲ್ಲಿ ಹೆಚ್ಚು ಮತಗಳನ್ನು ಪಡೆದುಕೊಂಡಿತ್ತು’ ಎಂದು ಅವರು ವಿವರಿಸಿದರು.
ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ 2024ರಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ 48 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 37ರಲ್ಲಿ, ಐಎನ್‌ಎಲ್‌ಡಿ ಎರಡರಲ್ಲಿ ಗೆದ್ದಿದ್ದವು. ಮೂವರು ಪಕ್ಷೇತರರು ಜಯಸಾಧಿಸಿದ್ದರು.
ರಾಹುಲ್ ಗಾಂಧಿ ಆರೋಪಗಳೇನು?
ಹರಿಯಾಣದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತಿತ್ತು. ಅದನ್ನು ಸೋಲಾಗಿ ಪರಿವರ್ತಿಸಲು ‘ಆಪರೇಷನ್ ಸರ್ಕಾರ್ ಚೋರಿ’ ಪ್ರಾರಂಭವಾಯಿತು. ಬಿಜೆಪಿಯ ಗೆಲುವನ್ನು ಖಚಿತಪಡಿಸಲು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಇಬ್ಬರು ಚುನಾವಣಾ ಆಯುಕ್ತರು ಅದರ ಜತೆಗೆ ಕೈಜೋಡಿಸಿದ್ದರು
ಬಿಜೆಪಿ ಜತೆ ಗುರುತಿಸಿಕೊಂಡಿರುವ ಸಹಸ್ರಾರು ಜನರು ಉತ್ತರ ಪ್ರದೇಶ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲೂ ಮತ ಚಲಾಯಿಸಿದ್ದಾರೆ
ಹರಿಯಾಣದಲ್ಲಿ ಮತ ಕಳವಿಗಾಗಿ 2541144 ನಕಲಿ ನಮೂದುಗಳನ್ನು ಮಾಡಲಾಗಿತ್ತು. ಅಂದರೆ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ ಆಗಿದ್ದರು. ಇದರ ಪರಿಣಾಮ ಕಾಂಗ್ರೆಸ್ ಎಂಟು ಕ್ಷೇತ್ರಗಳಲ್ಲಿ ಒಟ್ಟು 22779 ಮತಗಳಿಂದ ಸೋತಿದೆ
ಈ ಮತಕಳವಿನ ದತ್ತಾಂಶ ಕಂಡು ಆಘಾತವಾಯಿತು. ಮೊದಲಿಗೆ ನಂಬಲು ಆಗಲಿಲ್ಲ. ಹೀಗಾಗಿ ಪುನಃ ಪರಿಶೀಲಿಸಲು ತಂಡಕ್ಕೆ ಸೂಚಿಸಿದ್ದೆ. ಹರಿಯಾಣದಲ್ಲಿ ಕಾಂಗ್ರೆಸ್‌ನ ಗೆಲುವನ್ನು ಸೋಲಾಗಿ ಪರಿವರ್ತಿಸುವ ಯೋಜನೆ ಜಾರಿಯಲ್ಲಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ‘ಜೆನ್–ಝಿ’ಗಳ ಭವಿಷ್ಯವನ್ನು ಕದಿಯಲಾಗುತ್ತಿದೆ. ಇದನ್ನು ಯುವಜನರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು
ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಮತ ಎಣಿಕೆಗೂ ಎರಡು ದಿನ ಮೊದಲು ಬಿಜೆಪಿ ಗೆಲ್ಲುತ್ತದೆ ಮತ್ತು ನಮ್ಮಲ್ಲಿ ಒಂದು ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳಿದ್ದರು (ಈ ಕುರಿತು ವಿಡಿಯೊವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು). ಇದು ಅನುಮಾನ ಮೂಡಿಸುವುದಿಲ್ಲವೆ?
ಕರ್ನಾಟಕದ ಮಹದೇವಪುರ ಆಳಂದದಲ್ಲಿ ನಡೆದ ಮತಕಳವನ್ನು ಗಮನಿಸಿದ್ದೇವೆ. ಅದು ಈ ಎರಡು ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ. ವಿವಿಧ ರಾಜ್ಯಗಳು ಮತ್ತು ರಾಷ್ಟ್ರಮಟ್ಟದಲ್ಲಿ ವ್ಯಾಪಿಸಿದೆ ಎಂಬ ಶಂಕೆಯಿತ್ತು. ಅದಕ್ಕೀಗ ದೊರೆತಿರುವ ನಿದರ್ಶನಗಳು ಪುಷ್ಟಿ ನೀಡುತ್ತವೆ
ಮತದಾರರ ಪಟ್ಟಿಯಲ್ಲಿ ಇದೆ ಬ್ರೆಜಿಲ್ ರೂಪದರ್ಶಿ ಹೆಸರು!
ರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರ ಚಿತ್ರ 10 ಮತಗಟ್ಟೆಗಳಲ್ಲಿನ ಮತದಾರರ ಪಟ್ಟಿಯಲ್ಲಿ 22 ಬಾರಿ ಕಾಣಿಸಿಕೊಂಡಿದೆ. ಇದು ‘ಕೇಂದ್ರೀಕೃತ ಕಾರ್ಯಾಚರಣೆ’ ಅಲ್ಲವೇ? ಹೀಗೆ ಹಲವು ಬಾರಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆ ಬ್ರೆಜಿಲ್‌ನ ರೂಪದರ್ಶಿ ಎಂದು ರಾಹುಲ್ ಹೇಳಿದರು. ಮಹಿಳೆಯ ಚಿತ್ರವನ್ನು ಪರದೆ ಮೇಲೆ ಪ್ರದರ್ಶಿಸಿದರು.
ಆಧಾರರಹಿತ ಆರೋಪ: ಆಯೋಗ
‘ಮತ ಕಳವಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಗಳು ಆಧಾರರಹಿತ. ಹರಿಯಾಣದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿಲ್ಲ’ ಎಂದು ಚುನಾವಣಾ ಆಯೋಗದ ಮೂಲಗಳು ಬುಧವಾರ ತಿಳಿಸಿವೆ.
‘ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರುಗಳು ಸೇರ್ಪಡೆಯಾಗಿದ್ದರೆ ಪಟ್ಟಿ ಪರಿಷ್ಕರಣೆ ವೇಳೆ ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟರು ಏಕೆ ಆಕ್ಷೇಪಣೆಗಳನ್ನು ಸಲ್ಲಿಸಲಿಲ್ಲ’ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಮತದಾನದ ಮೇಲ್ವಿಚಾರಣೆಗೆ ಮತ್ತು ಅಕ್ರಮಗಳನ್ನು ಗುರುತಿಸಲು ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟ್‌ಗಳನ್ನು ನಿಯೋಜಿಸುತ್ತವೆ.
ಆರೋಪದಲ್ಲಿ ಹುರುಳಿಲ್ಲ: ರಿಜಿಜು
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಕಳವು ಆಗಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿದರು.
‘ರಾಹುಲ್ ಅವರು ತನ್ನ ವೈಫಲ್ಯಗಳನ್ನು ಮರೆ ಮಾಚಲು ಚುನಾವಣಾ ಆಯೋಗದ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶವನ್ನೇ ಅವಮಾನಿಸುತ್ತಿದ್ದಾರೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಭಾರತ ವಿರೋಧಿ ಶಕ್ತಿಗಳ ಜತೆ ಸೇರಿಕೊಂಡಿರುವ ಅವರು ದೇಶಕ್ಕೆ ಕಳಂಕ ತರಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು. ‘ಚುನಾವಣಾ ಸಮಯದಲ್ಲಿ ಜನರನ್ನು ಭೇಟಿ ಮಾಡದೆ ವಿದೇಶಕ್ಕೆ ಹಾರುವ ರಾಹುಲ್ ಪಕ್ಷ ಸೋತ ಬಳಿಕ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ’ ಎಂದು ಸಚಿವರು ಹೇಳಿದರು.
‘ಮತದಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ ಅದನ್ನು ಚುನಾವಣಾ ಆಯೋಗ ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಅದನ್ನು ಅವರು ಎಂದಿಗೂ ಮಾಡಿಲ್ಲ’ ಎಂದು ಅವರು ದೂರಿದರು.
ಬಿಹಾರದಲ್ಲೂ ಇದೇ ಕಾರ್ಯತಂತ್ರ ನಡೆಯಲಿದೆ. ಚುನಾವಣೆ ನಂತರ ಇಲ್ಲೂ ನಮಗೆ ಮತಕಳವಿನ ಪುರಾವೆಗಳು ದೊರೆಯುತ್ತವೆ. ಅದನ್ನೂ ನಿಮ್ಮ ಮುಂದಿಡುತ್ತೇವೆ.– ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಎನ್‌ಡಿಎ ಎಲ್ಲವನ್ನು ನಾಶ ಮಾಡುತ್ತಿದೆ. ಭವಿಷ್ಯದಲ್ಲಿ ಚುನಾವಣೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ನೀವೆಲ್ಲ ಏಕೆ ಮೌನವಾಗಿದ್ದೀರಿ. ಅವರನ್ನು ಅಧಿಕಾರದಿಂದ ಕಿತ್ತೆಸೆಯಿರಿ.– ಪ್ರಿಯಾಂಕಾ ಗಾಂಧಿ ವಾದ್ರಾ, ಸಂಸದೆ (ಬಿಹಾರದ ರ್‍ಯಾಲಿಯಲ್ಲಿ)
ಜನ ಬೆಂಬಲ ದೊರೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮೋದಿ– ಅಮಿತ್ ಶಾ ಜೋಡಿ ಮತದಾರರ ಪಟ್ಟಿಯನ್ನೇ ಬದಲಿಸಿ ಬಿಡುತ್ತದೆ.– ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.