ADVERTISEMENT

ಮಹಿಳಾ ಕೋಚ್‌ಗೆ ಲೈಂಗಿಕ ಕಿರುಕುಳ ಆರೋಪ : ಹರಿಯಾಣ ಕ್ರೀಡಾ ಸಚಿವ ರಾಜೀನಾಮೆ

ಐಎಎನ್ಎಸ್
Published 1 ಜನವರಿ 2023, 9:18 IST
Last Updated 1 ಜನವರಿ 2023, 9:18 IST
   

ಚಂಡೀಗಢ: ಜೂನಿಯರ್ ಅಥ್ಲೆಟಿಕ್ಸ್ ಕೋಚ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹರಿಯಾಣ ಕ್ರೀಡಾ ಸಚಿವ ಮತ್ತು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ವಿರುದ್ಧ ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದು, ಭಾನುವಾರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕ್ರೀಡಾ ಖಾತೆಯನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಹಸ್ತಾಂತರಿಸಿದ್ದೇನೆ. ಆದರೆ, ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸಿಂಗ್‌ ತಿಳಿಸಿದ್ದಾರೆ.

ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪ ಸುಳ್ಳಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಲಿ. ತನಿಖೆಯ ವರದಿ ಬರುವವರೆಗೆ ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನು ಸಿಎಂಗೆ ವಹಿಸುತ್ತೇನೆ ಎಂದು ಸಿಂಗ್‌ ಹೇಳಿದ್ದಾರೆ.

ADVERTISEMENT

ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮತ್ತು ಮೊದಲ ಬಾರಿಗೆ ಶಾಸಕರೂ ಆಗಿರುವ 36 ವರ್ಷದ ಸಂದೀಪ್‌ ಸಿಂಗ್‌ ವಿರುದ್ಧ ಶನಿವಾರ ಲೈಗಿಂಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ.

ದೂರಿನ ಮೇರೆಗೆ, ಐಪಿಸಿ ಸೆಕ್ಷನ್ 354, 354-ಎ, 354-ಬಿ, 342 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿನ ಸೆಕ್ಟರ್ 26 ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಹರಿಯಾಣದ ಮಹಿಳಾ ತರಬೇತುದಾರರೊಬ್ಬರು ಗುರುವಾರ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಿದ್ದರು ಮತ್ತು ಒಂದು ದಿನದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮಹಿಳೆ ಸೆಪ್ಟೆಂಬರ್‌ನಲ್ಲಿ ಕ್ರೀಡಾ ಇಲಾಖೆಯಲ್ಲಿ ಜೂನಿಯರ್ ಕೋಚ್ ಆಗಿ ನೇಮಕಗೊಂಡಿದ್ದರು.
ಸಂದೀಪ್ ಸಿಂಗ್ ಸಾಮಾಜಿಕ ಜಾಲತಾಣ ಖಾತೆಗಳಿಂದ ತಮಗೆ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘ಜುಲೈ 1 ರಂದು, ಸಚಿವರು ಸ್ನ್ಯಾಪ್‌ಚಾಟ್ ಕರೆ ಮಾಡಿದರು ಮತ್ತು ದಾಖಲೆಗಳ ಪರಿಶೀಲನೆಗಾಗಿ ಚಂಡೀಗಢದ ಸೆಕ್ಟರ್ 7 ನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡುವಂತೆ ತನ್ನನ್ನು ಕೇಳಿದರು. ಸಂಜೆ 6.50 ರ ಸುಮಾರಿಗೆ ಅವರು ನನ್ನನ್ನು ತಮ್ಮ ಕಚೇರಿಗೆ ಕರೆದು ಕಿರುಕುಳ ನೀಡಿದ್ದಾರೆ. ನನ್ನ ಟಿ-ಶರ್ಟ್ ಹರಿದಿತ್ತು. ಬಾಗಿಲು ಲಾಕ್‌ ಆಗಿರಲಿಲ್ಲ. ಹೀಗಾಗಿ ಅವರನ್ನು ಪಕ್ಕಕ್ಕೆ ತಳ್ಳಿ ಕೋಣೆಯಿಂದ ಹೊರಗೆ ಓಡಿಬಂದೆ’ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಒತ್ತಾಯಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಲೋಕದಳವು ಸಂದೀಪ್ ಸಿಂಗ್ ಅವರನ್ನು ಸರ್ಕಾರ ವಜಾಗೊಳಿಸಬೇಕೆಂದು ಒತ್ತಾಯಿಸಿದೆ.

ಈತನ್ಮಧ್ಯೆ, ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.