ADVERTISEMENT

ಬಿಲ್ಕಿಸ್‌ ಅತ್ಯಾಚಾರಿಗಳ ಹೊಗಳಿದ ಶಾಸಕನಿಗೆ ಬಿಜೆಪಿ ಮತ್ತೆ ಟಿಕೆಟ್‌: ಮಹುವಾ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2022, 10:27 IST
Last Updated 13 ನವೆಂಬರ್ 2022, 10:27 IST
ಮಹುವಾ ಮೊಯಿತ್ರಾ (ಸಾಂದರ್ಭಿಕ ಚಿತ್ರ)
ಮಹುವಾ ಮೊಯಿತ್ರಾ (ಸಾಂದರ್ಭಿಕ ಚಿತ್ರ)   

ನವದೆಹಲಿ: ಬಿಲ್ಕಿಸ್‌ ಬಾನು ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಸಂಸ್ಕಾರವಂತ ಬ್ರಾಹ್ಮಣರು ಎಂದಿದ್ದ ಗೋಧ್ರಾ ಶಾಸಕನಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್‌ ನೀಡಿರುವುದನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರ ಟೀಕಿಸಿದ್ದಾರೆ. ಇದು ಗುಜರಾತ್‌ ಮಾದರಿ ಎಂದು ಕೆಣಿಕಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ಇತ್ತೀಚೆಗೆ ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಲ್ಕಿಸ್‌ ಬಾನು ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಗೋಧ್ರಾ ಶಾಸಕ ಚಂದ್ರಸಿಂಹ ರೌಲ್ಜಿ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ. ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸಮಿತಿಯಲ್ಲಿ ರೌಲ್ಜಿ ಅವರೂ ಇದ್ದರು.

ಅತ್ಯಾಚಾರಿಗಳ ಬಿಡುಗಡೆ ನಂತರ ಮಾತನಾಡಿದ್ದ ರೌಲ್ಜಿ ‘ಅವರು ಒಳ್ಳೆಯ ಜನ, ಬ್ರಾಹ್ಮಣರು. ಒಳ್ಳೆಯ ಸಂಸ್ಕಾರ ಹೊಂದಿದ್ದಾರೆ’ ಎಂದು ಹೇಳಿದ್ದರು.

ADVERTISEMENT

ರೌಲ್ಜಿ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸುತ್ತಲೇ ಇತ್ತ ಟ್ವೀಟ್‌ ಮಾಡಿರುವ ಮಹುವಾ ಮೊಹಿತ್ರಾ,

‘ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳು ಮತ್ತು ಹಂತಕರನ್ನು ಸಂಸ್ಕಾರವಂತ ಬ್ರಾಹ್ಮಣರು ಎಂದು ಕರೆದ ಗೋಧ್ರಾ ಶಾಸಕನಿಗೆ ಬಿಜೆಪಿ ಮತ್ತೆ ಟಿಕೆಟ್‌ ನೀಡಿದೆ. ಇದು ಗುಜರಾತ್‌ ಮಾದರಿ. ದ್ವೇಷ ಮತ್ತು ಹತ್ಯೆ ನಂತರ ಸನ್ಮಾನ ಮತ್ತು ಬಹುಮಾನ’ ಎಂದು ಅವರು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದ 11 ಅತ್ಯಾಚಾರಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಅವರ ಪೈಕಿ ಮೊಯಿತ್ರಾ ಅವರೂ ಒಬ್ಬರು. ಪ್ರಕರಣದ ವಿಚಾರಣೆ ನವೆಂಬರ್ 29ಕ್ಕೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.