ADVERTISEMENT

ಕೆನಡಾದಲ್ಲಿ ಹೆಚ್ಚಿದ ಭಾರತ ವಿರೋಧಿ ಅಪರಾಧ ಕೃತ್ಯ: ಸರ್ಕಾರದಿಂದ ಸಲಹೆ–ಸೂಚನೆ

ಐಎಎನ್ಎಸ್
Published 23 ಸೆಪ್ಟೆಂಬರ್ 2022, 11:42 IST
Last Updated 23 ಸೆಪ್ಟೆಂಬರ್ 2022, 11:42 IST
ವಿದೇಶಾಂಗ ಸಚಿವ ಜೈಶಂಕರ್‌
ವಿದೇಶಾಂಗ ಸಚಿವ ಜೈಶಂಕರ್‌    

ನವದೆಹಲಿ: ಕೆನಡಾದಲ್ಲಿ ದ್ವೇಷ ಪ್ರೇರಿತ ಅಪರಾಧಗಳು, ಮತೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಕೆನಡಾದಲ್ಲಿರುವ ಭಾರತೀಯ ಪ್ರಜೆಗಳಿಗೆ ಸಲಹೆ–ಸೂಚನೆ ನೀಡಿದೆ.

‘ಸಚಿವಾಲಯ ಮತ್ತು ಕೆನಡಾದಲ್ಲಿನ ಹೈ ಕಮಿಷನ್/ಕಾನ್ಸುಲೇಟ್ ಜನರಲ್ ಕೆನಡಾದ ಈ ವಿಷಯವನ್ನು ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದ್ದಾರೆ. ಅಪರಾಧಗಳ ಕುರಿತು ತನಿಖೆ ಮಾಡುವಂತೆಯೂ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ವಿನಂತಿಸಿದ್ದಾರೆ’ ಎಂದು ಸರ್ಕಾರ ಹೇಳಿದೆ.

ADVERTISEMENT

‘ಅಪರಾಧಿಗಳನ್ನು ಇಲ್ಲಿಯವರೆಗೆ ನ್ಯಾಯಾಂಗದ ಎದುರು ನಿಲ್ಲಿಸಲಾಗಿಲ್ಲ’ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು, ಶಿಕ್ಷಣ, ಪ್ರವಾಸ ಇನ್ನಿತರೆ ಕಾರಣಕ್ಕೆ ಕೆನಡಾಕ್ಕೆ ತೆರಳುತ್ತಿರುವವರು ಎಚ್ಚರಿಕೆ ವಹಿಸುವಂತೆಯೂ, ಜಾಗರೂಕರಾಗಿರುವಂತೆಯೂ ಸೂಚಿಸಲಾಗಿದೆ.

ಭಾರತೀಯ ಪ್ರಜೆಗಳು ಒಟ್ಟಾವದಲ್ಲಿರುವ ಹೈಕಮಿಷನ್‌ ಕಚೇರಿ, ಟೊರೊಂಟೊ, ವ್ಯಾಂಕೋವರ್‌ನಲ್ಲಿರುವ ಕನ್ಸುಲೇಟ್‌ ಜನರಲ್‌ ಕಚೇರಿಯಲ್ಲಿ ಅಥವಾ madad.gov.inನ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

‘ತುರ್ತು ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಬಳಿ ನೋಂದಾಯಿಸಿಕೊಳ್ಳುವುದು ಸೂಕ್ತ’ ಎಂದು ಸರ್ಕಾರ ಹೇಳಿದೆ.

ಕೆಲ ದಿನಗಳ ಹಿಂದೆ ಟೊರೊಂಟೊದ ಸ್ವಾಮಿನಾರಾಯಣ ದೇಗುಲದ ಮೇಲೆ ಖಾಲಿಸ್ತಾನ ಉಗ್ರರು ಭಾರತ ವಿರೋಧಿ ಬರಹ ಬರೆದು ವಿರೂಪಗೊಳಿಸಿದ್ದರು. ಇದು ವ್ಯಾಪಕ ಖಂಡನೆಗೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.