ADVERTISEMENT

ದ್ವೇಷ ತುಂಬಿರುವವರಿಂದ ದೇಶದ ಏಕತೆ ಹಾಳು: ಪ್ರಧಾನಿ ಮೋದಿ

ಪಿಟಿಐ
Published 16 ಸೆಪ್ಟೆಂಬರ್ 2024, 16:15 IST
Last Updated 16 ಸೆಪ್ಟೆಂಬರ್ 2024, 16:15 IST
ನರೇಂದ್ರ ಮೋದಿ –ಪಿಟಿಐ ಚಿತ್ರ
ನರೇಂದ್ರ ಮೋದಿ –ಪಿಟಿಐ ಚಿತ್ರ   

ಅಹಮದಾಬಾದ್: ದ್ವೇಷ ಹಾಗೂ ನಕಾರಾತ್ಮಕ ಧೋರಣೆಯನ್ನು ತುಂಬಿಕೊಂಡಿರುವ ಕೆಲವು ವ್ಯಕ್ತಿಗಳು ದೇಶದ ಏಕತೆಯನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೂರಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ನೀಡಿರುವ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿರುವ ಸಂದರ್ಭದಲ್ಲಿ ಮೋದಿ ಈ ಮಾತು ಆಡಿದ್ದಾರೆ.

ಸತತ ಮೂರನೆಯ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿರುವ ಮೋದಿ ಅವರು, ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೆಲವು ಯೋಜನೆಗಳನ್ನು ಉದ್ಘಾಟಿಸಿದರು. ಈ ಎಲ್ಲ ಯೋಜನೆಗಳ ಒಟ್ಟು ಮೊತ್ತ ₹8,000 ಕೋಟಿ. 

ADVERTISEMENT

ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಅವರು (ವಿರೋಧ ಪಕ್ಷಗಳು) ತುಷ್ಟೀಕರಣಕ್ಕಾಗಿ ಯಾವ ಮಿತಿಯನ್ನು ಬೇಕಿದ್ದರೂ ಮೀರಬಲ್ಲರು ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಕಾರಾತ್ಮಕತೆ ತುಂಬಿದ ಕೆಲವರು ಭಾರತದ ಏಕತೆಯನ್ನು ಗುರಿಯಾಗಿಸಿಕೊಂಡಿದ್ದಾರೆ, ದೇಶವನ್ನು ಒಡೆಯುವ ಉದ್ದೇಶ ಹೊಂದಿದ್ದಾರೆ. ದ್ವೇಷ ತುಂಬಿಕೊಂಡಿರುವ ವ್ಯಕ್ತಿಗಳು ಭಾರತ ಹಾಗೂ ಗುಜರಾತ್‌ಗೆ ಕೆಟ್ಟ ಹೆಸರು ತರುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ’ ಎಂದು ಆರೋಪಿಸಿದರು.

ಮೂರನೆಯ ಅವಧಿಯ ಮೊದಲ 100 ದಿನಗಳಲ್ಲಿ ವಿರೋಧ ಪಕ್ಷಗಳು ತಮ್ಮನ್ನು ಅವಮಾನಿಸಿದವು, ಗೇಲಿ ಮಾಡಿದವು ಹಾಗೂ ಅಣಕಿಸಿದವು ಎಂದು ದೂರಿದರು. ಹೀಗಿದ್ದರೂ ತಾವು ಈ ಅವಧಿಯಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯನ್ನು ಪೂರ್ಣಗೊಳಿಸಲು ಏಕ ಮನಸ್ಸಿನಿಂದ ಕೆಲಸ ಮಾಡಿದ್ದುದಾಗಿ ತಿಳಿಸಿದರು.

‘ಪ್ರತಿ ಭಾರತೀಯನೂ ದೇಶವನ್ನು ಮುಂದಕ್ಕೆ ಒಯ್ಯಲು ಯತ್ನಿಸುತ್ತಿರುವಾಗ, ನಕಾರಾತ್ಮಕ ಧೋರಣೆಯ ಕೆಲವು ವ್ಯಕ್ತಿಗಳು ದೇಶದ ಏಕತೆಯನ್ನು ಹಾಳುಮಾಡಲು ಬಯಸಿದ್ದಾರೆ. ಅವರು ದೇಶವನ್ನು ಒಡೆಯಲು ಬಯಸಿದ್ದಾರೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಲು ಅವರು ಬಯಸುತ್ತಿದ್ದಾರೆ ಎಂಬುದನ್ನು ನೀವು ಕೇಳಿದ್ದೀರಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಸಂವಿಧಾನ ಹಾಗೂ ಎರಡು ಕಾನೂನುಗಳನ್ನು ಜಾರಿಗೆ ತರಲು ಅವರು ಬಯಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.