ADVERTISEMENT

ಹಾಥರಸ್‌ ಘಟನೆ: ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ

ಪಿಟಿಐ
Published 18 ಡಿಸೆಂಬರ್ 2020, 11:00 IST
Last Updated 18 ಡಿಸೆಂಬರ್ 2020, 11:00 IST
ಸಿಬಿಐ
ಸಿಬಿಐ   

ನವದೆಹಲಿ: ದಲಿತ ಯುವತಿಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳುಶುಕ್ರವಾರ ತಿಳಿಸಿದ್ದಾರೆ.

‘ಸಂದೀಪ್‌, ಲವಕುಶ, ರವಿ ಹಾಗೂ ರಾಮು ಅವರ ವಿರುದ್ಧ ಸಿಬಿಐ ಹಾಥರಸ್‌ನ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ’ ಎಂದು ಆರೋಪಿಗಳ ಪರ ವಕೀಲರು ಮಾಧ್ಯಮದವರಿಗೆ ಹೇಳಿದ್ದಾರೆ.

ಮೇಲ್ವರ್ಗಕ್ಕೆ ಸೇರಿದ್ದ ನಾಲ್ವರು ಯುವಕರು ಸೆಪ್ಟೆಂಬರ್‌ 14ರಂದು 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ನವದೆಹಲಿಯ ಸಫ್ದಾರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಯುವತಿಯ ಅಂತ್ಯಕ್ರಿಯೆಯನ್ನು ರಾತ್ರೋ ರಾತ್ರಿ ನೆರವೇರಿಸಿದ್ದ ಉತ್ತರ ಪ್ರದೇಶ ಪೊಲೀಸರ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.

ADVERTISEMENT

‘ನ್ಯಾಯಾಂಗ ಬಂಧನದಲ್ಲಿದ್ದ ನಾಲ್ವರು ಆರೋಪಿಗಳ ವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿದ್ದರು. ಜೊತೆಗೆ ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಅವರಿಂದ ಅಗತ್ಯ ಮಾಹಿತಿ ಕಲೆಹಾಕಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಕರಣದ ಸಂಬಂಧ ಭಾರಿ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರವು ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಸಂಬಂಧ ತಂಡವೊಂದನ್ನು ರಚಿಸಿದ್ದ ಸಿಬಿಐ ತನಿಖೆಯ ಹೊಣೆಯನ್ನು ಘಾಜಿಯಾಬಾದ್‌ ಘಟಕಕ್ಕೆ ವಹಿಸಿತ್ತು. ಈ ತಂಡವು ಸಂತ್ರಸ್ತ ಯುವತಿಯ ಕುಟುಂಬದವರನ್ನು ಭೇಟಿಯಾಗಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.