ಹಾಥರಸ್: ಉತ್ತರ ಪ್ರದೇಶದ ಹಾಥರಸ್‌ನಲ್ಲಿ 2024ರ ಜುಲೈ 2ರ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ತನಿಖೆ ನಡೆಸಿದ ನ್ಯಾಯಾಂಗ ಸಮಿತಿಯು ಸತ್ಸಂಗ ನಡೆಸಿದ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅಲಿಯಾಸ್ ಸೂರಜ್‌ಪಾಲ್‌ಗೆ ಕ್ಲೀನ್ ಚಿಟ್ ನೀಡಿದೆ ಎಂದು ಬಾಬಾ ಪರ ವಕೀಲ ಎ.ಪಿ. ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಘಟನೆ ನಂತರ ಸರ್ಕಾರವು ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಶ್ರೀವಾಸ್ತವ ಅಧ್ಯಕ್ಷತೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹೇಮಂತ ರಾವ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಅವರ ಸಮಿತಿ ವಿಚಾರಣೆ ನಡೆಸಿತ್ತು.
ಸಿಕಂದರ್‌ರಾವ್ ಫುರಾಲಿ ಗ್ರಾಮದಲ್ಲಿ ಆಯೋಜಿಸಿದ್ದ ಸತ್ಸಂಗದಲ್ಲಿ ಕಾಲ್ತುಳಿತ ಉಂಟಾಗಿತ್ತು. 121 ಜನ ಮೃತಪಟ್ಟು ಸುಮಾರು 150 ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಮಕ್ಕಳೇ ಇದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಲ್ಲಿಯೂ ಸೂರಜ್‌ಪಾಲ್ ಹೆಸರು ದಾಖಲಿಸಿರಲಿಲ್ಲ.
ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಎ.ಪಿ. ಸಿಂಗ್, ‘ಇದರಲ್ಲಿ ಧರ್ಮ ಹಾಗೂ ಸತ್ಯ ಗೆದ್ದಿದೆ. ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಿಂದ 1,100 ಅಫಿಡವಿಟ್ ದಾಖಲಾಗಿದೆ. ಜತೆಗೆ ನ್ಯಾಯಾಂಗ ಸಮಿತಿಯು 500 ಸಾಕ್ಷಿಗಳ ಹೇಳಿಕೆ ದಾಖಲಿಸಿತ್ತು. ಪಾರದರ್ಶಕ ತನಿಖೆಗೆ ಸಹಕರಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ಧನ್ಯವಾಗಳು’ ಎಂದಿದ್ದಾರೆ.
ಈ ಘಟನೆಯಲ್ಲಿ ಕಾರ್ಯಕ್ರಮ ಆಯೋಜಕ ದೇವ್ ಪ್ರಕಾಶ್ ಮಧುಕರ್ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಉಪ ವಿಭಾಗಾಧಿಕಾರಿ ಹಾಗೂ ಸ್ಥಳೀಯ ಠಾಣಾಧಿಕಾರಿ ಸರ್ಕಾರ ಅಮಾನತುಗೊಳಿಸಿತ್ತು. ಸತ್ಸಂಗಕ್ಕೆ 80 ಸಾವಿರ ಜನರು ಭಾಗವಹಿಸಲು ಅನುಮತಿಸಲಾಗಿತ್ತು. ಆದರೆ 2.5 ಲಕ್ಷ ಜನರು ಸೇರಲು ಅವಕಾಶ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.