ADVERTISEMENT

ಪಶ್ಚಿಮ ಬಂಗಾಳ | ಶಿಕ್ಷಕರ ನೇಮಕ ರದ್ದು, ಮಮತಾ ಸರ್ಕಾರಕ್ಕೆ ಹಿನ್ನಡೆ

2016ರಲ್ಲಿ ನಡೆದಿದ್ದ ನೇಮಕಾತಿ * 25 ಸಾವಿರ ಅಭ್ಯರ್ಥಿಗಳ ಸ್ಥಿತಿ ಅತಂತ್ರ * ಬಡ್ಡಿ ಸೇರಿ ವೇತನ ಮರಳಿಸಲು ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 14:27 IST
Last Updated 22 ಏಪ್ರಿಲ್ 2024, 14:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಸರ್ಕಾರ ರಾಜ್ಯಮಟ್ಟದ ಆಯ್ಕೆ ಪರೀಕ್ಷೆಯ ಮೂಲಕ 2016ರಲ್ಲಿ ನಡೆಸಿದ್ದ ಸುಮಾರು 25 ಸಾವಿರ ಶಿಕ್ಷಕರ ನೇಮಕಾತಿಯನ್ನು ಕಲ್ಕತ್ತ ಹೈಕೋರ್ಟ್ ರದ್ದುಪಡಿಸಿದೆ.

ಸರ್ಕಾರಿ, ಅನುದಾನಿತ ಶಾಲೆಗಳ ಶಿಕ್ಷಕ ಹುದ್ದೆಗಳ ಭರ್ತಿಗೆ ನಡೆಸಿದ್ದ ಈ ನೇಮಕಾತಿ ಪ್ರಕ್ರಿಯೆಯನ್ನು ಅಸಿಂಧು ಎಂದು ಕೋರ್ಟ್ ಘೋಷಿಸಿತು. ಈ ಹುದ್ದೆಗಳ ಭರ್ತಿಗಾಗಿ ಮತ್ತೆ ಪ್ರಕ್ರಿಯೆ ಆರಂಭಿಸಬೇಕು ಎಂದೂ ಪಶ್ಚಿಮ ಬಂಗಾಳ ರಾಜ್ಯ ಶಾಲಾ ಸೇವಾ ಪ್ರಾಧಿಕಾರಕ್ಕೆ (ಎಸ್‌ಎಸ್‌ಸಿ) ಆದೇಶಿಸಿದೆ.

ಅಲ್ಲದೆ, ಆಗ ಈ ಹುದ್ದೆಗಳಿಗೆ ನೇಮಕವಾಗಿದ್ದವರು ಇದುವರೆಗೆ ಪಡೆದಿರುವ ವೇತನದ ಮೊತ್ತವನ್ನು ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದೂ ಪೀಠವು ಆದೇಶಿಸಿತು. 

ADVERTISEMENT

ಹೈಕೋರ್ಟ್‌ನ ವಿಭಾಗೀಯ ಪೀಠದ ಈ ಆದೇಶವು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. 

ನ್ಯಾಯಮೂರ್ತಿಗಳಾದ ದೇಬಾಂಶು ಬಸಾಕ್, ಮೊಹಮ್ಮದ್‌ ಶಬ್ಬರ್ ರಶೀದಿ ಅವರಿದ್ದ ಪೀಠ ಈ ಆದೇಶ ನೀಡಿತು. ತನಿಖೆಯನ್ನು ಮುಂದುವರಿಸಿ, 3 ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸಿಬಿಐಗೆ ಆದೇಶಿಸಿತು.

ರದ್ದು ಆದೇಶಕ್ಕೆ ತಡೆ ನೀಡಬೇಕು ಎಂಬ ಕೆಲ ಅರ್ಜಿದಾರರ ಮನವಿಯನ್ನು ಪೀಠವು ಇದೇ ಸಂದರ್ಭದಲ್ಲಿ ತಳ್ಳಿಹಾಕಿತು.

24,640 ಹುದ್ದೆಗಳ ಭರ್ತಿಗೆ 2016ರಲ್ಲಿ ಪರೀಕ್ಷೆ ನಡೆದಿತ್ತು. 25,753 ಜನರಿಗೆ ನೇಮಕಾತಿ ಆದೇಶ ನೀಡಲಾಗಿತ್ತು ಎಂದು ಕೆಲ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಫಿರ್ದೌಸ್‌ ಶಮೀಮ್ ತಿಳಿಸಿದರು. 

ಕೋರ್ಟ್‌ನ ಆದೇಶ ಹೊರಬೀಳುತ್ತಿದ್ದಂತೆ ನ್ಯಾಯಾಲಯದ ಹೊರಗೆ ಕಾಯುತ್ತಿದ್ದ ಶಿಕ್ಷಕ ಹುದ್ದೆಯ ನೂರಾರು ಆಕಾಂಕ್ಷಿಗಳು ಸಂಭ್ರಮವನ್ನು ವ್ಯಕ್ತಪಡಿಸಿದರೆ, ಹಲವರು ಕಣ್ಣೀರು ಹಾಕಿದರು.

‘ಈ ದಿನಕ್ಕಾಗಿ ನಾವು ಕಾಯುತ್ತಿದ್ದೆವು. ಹಲವು ವರ್ಷಗಳ ಕಾಲ ರಸ್ತೆಗಳಲ್ಲಿ ನಡೆಸಿದ ಹೋರಾಟಕ್ಕೆ ಕಡೆಗೂ ಈಗ ನ್ಯಾಯ ಸಿಕ್ಕಿದೆ’ ಎಂದು ಆಕಾಂಕ್ಷಿಯೊಬ್ಬರು ಸಂತಸ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಈ ಪ್ರಕರಣದ ವಿಚಾರಣೆಗಾಗಿ ರಚನೆಯಾಗಿದ್ದ ವಿಭಾಗೀಯ ಪೀಠವು, ಶಿಕ್ಷಕರ ಆಯ್ಕೆಗೆ ಸಂಬಂಧಿಸಿ ಹಲವು ಅರ್ಜಿಗಳು, ಮನವಿ ಆಧರಿಸಿ ವಿಚಾರಣೆಯನ್ನು ನಡೆಸಿತ್ತು. ಈ ವಿಚಾರಣೆಯು ಮಾರ್ಚ್‌ 20ರಂದು ಮುಗಿದಿದ್ದು, ಅಂತಿಮ ತೀರ್ಪು ಕಾಯ್ದಿರಿಸಲಾಗಿತ್ತು.

ಬೋಧಕ ಮತ್ತು ಬೋಧಕೇತರ ಹಂತದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗ ಪೀಠವು ನೇಮಕಾತಿ ಆದೇಶವನ್ನೇ ರದ್ದುಪಡಿಸಿದೆ.

9, 10, 11, 12ನೇ ತರಗತಿಗಳ ಶಿಕ್ಷಕರು ಮತ್ತು ಗ್ರೂಪ್‌ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳ ಭರ್ತಿಗಾಗಿ ಎಸ್‌ಎಲ್‌ಎಸ್‌ಟಿ–2016ಡಿ ನೇಮಕಾತಿ ಪ್ರಕ್ರಿಯೆ ನಡೆದಿತ್ತು.

ಪರೀಕ್ಷೆ ಬರೆದು, ಹುದ್ದೆ ವಂಚಿತರಾಗಿದ್ದ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿ ಆಧರಿಸಿ, ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಪೀಠ ಈ ಹಿಂದೆ ಸಿಬಿಐ ತನಿಖೆಗೆ ಆದೇಶಿಸಿತ್ತು. ತನಿಖೆ  ನಡೆಸಿದ್ದ ಸಿಬಿಐ ಸುಪ್ರೀಂ ಕೋರ್ಟ್ ಆದೇಶದಂತೆ ಎರಡು ತಿಂಗಳಲ್ಲೇ ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು.

ತನಿಖೆ ಕೈಗೊಂಡಿದ್ದ ಸಿಬಿಐ, ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಹಿಂದೆ ಕರ್ತವ್ಯದಲ್ಲಿದ್ದ ರಾಜ್ಯ ಶಾಲಾ ಸೇವಾ ಪ್ರಾಧಿಕಾರದ (ಎಸ್‌ಎಸ್‌ಸಿ) ಕೆಲ ಸಿಬ್ಬಂದಿಯನ್ನು ಬಂಧಿಸಿತ್ತು.

ಶಿಕ್ಷಕರ ನೇಮಕಾತಿ ಪರೀಕ್ಷೆ ರದ್ದು ಕುರಿತ ಹೈಕೋರ್ಟ್‌ನ ಆದೇಶದ ಪರಿಶೀಲನೆ ಬಳಿಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು

-ಸಿದ್ಧಾರ್ಥ ಮಜುಂದಾರ್ ಅಧ್ಯಕ್ಷ ರಾಜ್ಯ ಶಾಲಾ ಸೇವಾ ಪ್ರಾಧಿಕಾರ (ಎಸ್ಎಸ್‌ಸಿ)

ಸಿ.ಎಂ ರಾಜೀನಾಮೆಗೆ ಒತ್ತಾಯ

ತಮ್ಲುಕ್ ಪಶ್ಚಿಮ ಬಂಗಾಳ (ಪಿಟಿಐ): ಶಿಕ್ಷಕರ ನೇಮಕಾತಿ ಕುರಿತ ಹೈಕೋರ್ಟ್‌ ತೀರ್ಪು ‘ಸೂಕ್ತವಾಗಿದೆ’ ಎಂದು ಮಾಜಿ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಹೇಳಿದ್ದಾರೆ. ತೀರ್ಪಿನ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.  ಈ ಹಿಂದೆ ಸೇವೆಯ‌ಲ್ಲಿದ್ದಾಗ ನೇಮಕಾತಿಯಲ್ಲಿ ಅಕ್ರಮ ಆರೋಪ ಕುರಿತಂತೆ ಸಿಬಿಐ ತನಿಖೆಗೆ ಗಂಗೋಪಾಧ್ಯಾಯ ಆದೇಶಿಸಿದ್ದರು. ‘ಅಕ್ರಮದಲ್ಲಿ ಭಾಗಿಯಾಗಿರುವ ರಾಜ್ಯ ಸರ್ಕಾರದ ಎಲ್ಲ ವಂಚಕರನ್ನು ನೇಣಿಗೆ ಹಾಕಬೇಕು’ ಎಂದೂ ಅಭಿಪ್ರಾಯಪಟ್ಟಿದ್ದರು.  ನ್ಯಾಯಮೂರ್ತಿ ಹುದ್ದೆಗೆ ಈಚೆಗೆ ರಾಜೀನಾಮೆ ನೀಡಿದ್ದ ಗಂಗೋಪಾಧ್ಯಾಯ ಬಳಿಕ ಬಿಜೆಪಿಗೆ ಸೇರಿದ್ದರು. ಸದ್ಯ ತಮ್ಲುಕ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಆದೇಶ ‘ಕಾನೂನುಬಾಹಿರ’ ಪ್ರಶ್ನಿಸುತ್ತೇವೆ–ಸಿ.ಎಂ 

ಶಿಕ್ಷಕರ ನೇಮಕಾತಿ ರದ್ದುಪಡಿಸಿದ ಹೈಕೋರ್ಟ್‌ನ ಆದೇಶವು ಕಾನೂನುಬಾಹಿರವಾಗಿದೆ. ಸರ್ಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿದ್ದಾರೆ. ರಾಯಗಂಜ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು ‘ನ್ಯಾಯಾಂಗದ ಕೆಲವರ ಮೇಲೆ ಬಿಜೆಪಿ ನಾಯಕರು ಪ್ರಭಾವ ಬೀರಿದ್ದರಿಂದ ಈ ರೀತಿ ತೀರ್ಪು ಬಂದಿದೆ’ ಎಂದು ನೇರ ಆರೋಪ ಮಾಡಿದ್ದರು. ‘ಎಲ್ಲ ನೇಮಕಾತಿ ರದ್ದುಪಡಿಸುವ ಆದೇಶ ಕಾನೂನುಬಾಹಿರ. ಉದ್ಯೋಗ ಕಳೆದುಕೊಂಡವರ ಪರವಾಗಿ ಸರ್ಕಾರ ಇದೆ. ಅವರಿಗೆ ನ್ಯಾಯ ಸಿಗುವಂತೆ ಮಾಡುತ್ತೇವೆ. ಈ ಆದೇಶವನ್ನು ಪ್ರಶ್ನಿಸಲಿದ್ದೇವೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.