ಲಖನೌ: ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸೋಮವಾರ ವಿಲೇವಾರಿ ಮಾಡಿದ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು, ಅರ್ಜಿದಾರರಿಗೆ ಪರ್ಯಾಯ ಕಾನೂನು ಹೋರಾಟ ನಡೆಸಲು ಅವಕಾಶ ನೀಡಿದೆ.
‘ದೂರನ್ನು ಪರಿಹರಿಸಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳಲು ಯಾವುದೇ ಕಾರಣಗಳಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎ.ಆರ್ ಮಸೂದಿ ಮತ್ತು ರಾಜೀವ್ ಸಿಂಗ್ ಅವರ ಪೀಠ ಹೇಳಿದೆ.
‘ರಾಹುಲ್ ಗಾಂಧಿ ಅವರು ಬ್ರಿಟನ್ ಪ್ರಜೆ ಎನ್ನುವುದನ್ನು ದೃಢೀಕರಿಸಲು ಅಗತ್ಯವಾದ ದಾಖಲೆಗಳು ಮತ್ತು ಬ್ರಿಟನ್ ಸರ್ಕಾರದ ಇ–ಮೇಲ್‌ಗಳು ಇವೆ. ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮತ್ತು ಲೋಕಸಭಾ ಸದಸ್ಯರಾಗಲು ರಾಹುಲ್ ಗಾಂಧಿ ಅರ್ಹರಲ್ಲ’ ಎಂದು ಅರ್ಜಿದಾರ, ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಸ್.ವಿಘ್ನೇಶ್ ಶಿಶಿರ್ ಅವರು ಹೇಳಿದ್ದರು.
ರಾಹುಲ್ ಗಾಂಧಿಯವರ ಭಾರತೀಯ ಪೌರತ್ವದ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಿ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಮೇ 5ರವರೆಗೆ ಕಾಲಾವಕಾಶ ನೀಡಿತ್ತು.
‘ರಾಹುಲ್ ಗಾಂಧಿಯವರು ದ್ವಿಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎರಡು ಬಾರಿ ದೂರು ನೀಡಿದ್ದೇನೆ. ಆದರೆ, ಕ್ರಮ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.