ADVERTISEMENT

ಅತ್ಯಾಚಾರ ಪ್ರಕರಣ: ಮುಂಬೈ ಪತ್ರಕರ್ತನ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 16:14 IST
Last Updated 9 ಏಪ್ರಿಲ್ 2021, 16:14 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸ್‌ ವಿಚಾರಣೆಯ ಸಲುವಾಗಿ ಮುಂಬೈ ಮೂಲದ ಟಿ.ವಿ ವಾಹಿನಿ ಪತ್ರಕರ್ತನೊಬ್ಬನನ್ನು ಬಂಧಿಸುವುದರ ವಿರುದ್ಧ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆಯ ತಡೆಯಾಜ್ಞೆ ನೀಡಿದೆ.

ಪತ್ರಕರ್ತ ವರುಣ್ ಹಿರೆಮಠ್‌ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ದೆಹಲಿ ಪೊಲೀಸರು ಮತ್ತು ದೂರುದಾರ ಮಹಿಳೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.

‘ಅರ್ಜಿದಾರರನ್ನು ವಿಚಾರಣೆಯ ಮುಂದಿನ ದಿನಾಂಕದವರೆಗೆ ಬಂಧಿಸಬಾರದು. ಕೋರ್ಟ್‌ ನಿರ್ದೇಶನ ನೀಡಿದ ನಂತರ ಅವರು ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ’ ಎಂದು ಹೈಕೋರ್ಟ್ ಹೇಳಿದೆ.

ADVERTISEMENT

ಅರ್ಜಿದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಲು ಮತ್ತು ಪ್ರಕರಣದ ಸ್ಥಿತಿಯ ವರದಿಯನ್ನು ಸಲ್ಲಿಸಲು ಪೊಲೀಸರಿಗೆ ನಿರ್ದೇಶನ ನೀಡಿರುವ ಹೈಕೋರ್ಟ್‌, ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ನಿಗದಿಪಡಿಸಿದೆ.

ಹಿರೇಮಠ್‌ ‍ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಕಾಲತ್ತು ವಹಿಸಿದ್ದು, ಈ ಹಿಂದೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾರ್ಚ್ 12ರಂದು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ ನಂತರ ಹಿರೇಮಠ್‌ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಫೆಬ್ರುವರಿ 20ರಂದು ಚಾಣಕ್ಯಪುರಿಯ ಸ್ಟಾರ್‌ ಹೋಟೆಲ್‌ನಲ್ಲಿ ಹಿರೇಮಠ್‌ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 22 ವರ್ಷದ ಯುವತಿ ಆರೋಪಿಸಿ ಚಾಣಕ್ಯಪುರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಮತ್ತು ದೂರುದಾರ ಯುವತಿ ನಡುವೆ ಮೊದಲಿನಿಂದಲೂ ಲೈಂಗಿಕ ಸಂಬಂಧವಿತ್ತು ಎಂದು 28 ವರ್ಷದ ಆರೋಪಿ ಪರ ವಕೀಲರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದಾರೆ. ಇಬ್ಬರ ನಡುವೆ ಸಮ್ಮತಿಯ ಲೈಂಗಿಕ ಸಂಬಂಧವಿತ್ತೆಂದು ಸಾಬೀತುಪಡಿಸುವ ದಾಖಲೆಗಳಿದ್ದರೆ ಅವುಗಳನ್ನು ಪೊಲೀಸರಿಗೆ ಒದಗಿಸಿ, ಅವುಗಳನ್ನು ಪೊಲೀಸರು ಪರಿಶೀಲಿಸಲಿ ಎಂದು ಕೋರ್ಟ್‌ ನಿರ್ದೇಶನ ನೀಡಿತು.

ಯುವತಿ ಪರ ವಕೀಲ ಸಿದ್ಧಾರ್ಥ್ ಅರೋರಾ, ಕಳೆದ 50 ದಿನಗಳಿಂದ ಪರಾರಿಯಾಗಿರುವುದರಿಂದಆರೋಪಿ ಹಿರೇಮಠ್‌ಗೆ ಯಾವುದೇ ರಕ್ಷಣೆ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.