ADVERTISEMENT

ಮುಂದಿನ ಚುನಾವಣೆಗಳಲ್ಲಿ ಇವಿಎಂಗಳ ಬದಲು ಮತಪತ್ರ; ಆಗಸ್ಟ್ 3ಕ್ಕೆ ಅರ್ಜಿಯ ವಿಚಾರಣೆ

ಪಿಟಿಐ
Published 16 ಜುಲೈ 2021, 13:07 IST
Last Updated 16 ಜುಲೈ 2021, 13:07 IST
ವಿದ್ಯುನ್ಮಾನ ಮತಯಂತ್ರಗಳು (ಇವಿಎಂ)–ಸಾಂದರ್ಭಿಕ ಚಿತ್ರ
ವಿದ್ಯುನ್ಮಾನ ಮತಯಂತ್ರಗಳು (ಇವಿಎಂ)–ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಮುಂದಿನ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಮತಪತ್ರಗಳನ್ನು ಬಳಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಆಗಸ್ಟ್ ತಿಂಗಳಲ್ಲಿ ನಡೆಸಲಾಗುವುದು ಎಂದು ದೆಹಲಿ ಹೈಕೊರ್ಟ್ ಶುಕ್ರವಾರ ತಿಳಿಸಿತು.

ವರ್ಚುವಲ್ ವಿಚಾರಣೆಯ ವೇಳೆ ಅರ್ಜಿದಾರರಿಗೆ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾದವು. ಆಗ ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು, ವಾದ ಮಂಡನೆಗೆ ಮತ್ತೊಮ್ಮೆ ಅವಕಾಶ ನೀಡಲು ನಿರ್ಧರಿಸಿದ್ದು, ವಿಚಾರಣೆಯನ್ನು ಆಗಸ್ಟ್ 3ಕ್ಕೆ ನಿಗದಿಪಡಿಸಿತು.

ಅರ್ಜಿದಾರರಾದ ವಕೀಲ ಸಿ.ಆರ್‌.ಜಯಸುಕಿನ್‌ ಅವರು, ‘ಅನೇಕ ಅಭಿವೃದ್ಧಿ ರಾಷ್ಟ್ರಗಳು ಇವಿಎಂ ಬಳಕೆಯನ್ನು ನಿಷೇಧಿಸಿ, ಮತಪತ್ರಗಳ ಬಳಕೆಗೆ ಒತ್ತು ನೀಡಿವೆ. ಮತಯಂತ್ರಗಳನ್ನು ತಿರುಚಲು ಅವಕಾಶ ಇರುವುದರಿಂದ ಮತಪತ್ರಗಳ ಬಳಕೆಯೇ ಹೆಚ್ಚು ಸುರಕ್ಷಿತ ವಿಧಾನವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಸಂವಿಧಾನದ ವಿಧಿ 324ರ ಅನ್ವಯ, ಚುನಾವಣಾ ಆಯೋಗವು ನಡೆಸಲಿರುವ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು, ಮತದಾರರ ಭಾವನೆಗಳನ್ನು ಬಿಂಬಿಸಬೇಕು. ಇದಕ್ಕೆ ಪೂರಕವಾಗಿ ಇವಿಎಂಗಳ ಬದಲಿಗೆ ಮತಪತ್ರಗಳನ್ನೇ ಬಳಸಲು ಸೂಚಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಅಲ್ಪಾವಧಿಯ ವಿಚಾರಣೆಯ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್‌ ಶರ್ಮಾ ಅವರು, ಇಂಥ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಮುಂದೆಯೂ ಇತ್ತು. ಅಲ್ಲಿ ತಿರಸ್ಕರಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ವಕೀಲ ಸಿದ್ಧಾರ್ಥ ಕುಮಾರ್, ಸುಪ್ರೀಂ ಕೋರ್ಟ್ ಮತ್ತು ನಾಲ್ಕು ಭಿನ್ನ ಹೈಕೋರ್ಟ್‌ಗಳು ಈಗಾಗಲೇ ಈ ವಿಷಯವನ್ನು ಇತ್ಯರ್ಥಪಡಿಸಿವೆ. ಆಯೋಗವು ಸದ್ಯ ಅನುಸರಿಸುತ್ತಿರುವ ಕ್ರಮವನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂಬುದನ್ನು ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.