ADVERTISEMENT

ಎರಡು ಮಕ್ಕಳ ನಿಯಮ ಉಲ್ಲಂಘನೆ: ಪಾಲಿಕೆ ಸದಸ್ಯತ್ವ ರದ್ದು -ಬಾಂಬೆ ಹೈಕೋರ್ಟ್

ಸೊಲ್ಲಾಪುರ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಬಾಂಬೆ ಹೈಕೋರ್ಟ್

ಪಿಟಿಐ
Published 26 ಮೇ 2021, 8:34 IST
Last Updated 26 ಮೇ 2021, 8:34 IST
.
.   

ಮುಂಬೈ: ಎರಡು ಮಕ್ಕಳ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸೊಲ್ಲಾಪುರ ಮಹಾನಗರ ಪಾಲಿಕೆಯ ಸದಸ್ಯತ್ವವನ್ನು ರದ್ದುಪಡಿಸಿದ್ದ ಸಿವಿಲ್‌ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿದೆ.

ಸೊಲ್ಲಾಪುರ ಮಹಾನಗರ ಪಾಲಿಕೆಗೆ ಶಿವಸೇನಾ ನಾಯಕಿ ಅನಿತಾ ಮಾಗರ್‌ ಅವರು ಆಯ್ಕೆಯಾಗಿದ್ದರು. ಆದರೆ, ಅನಿತಾ ಅವರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕೆ ಸಿವಿಲ್‌ ನ್ಯಾಯಾಲಯ ಸದಸ್ಯತ್ವವನ್ನು ರದ್ದುಪಡಿಸಿ 2018ರಲ್ಲಿ ಆದೇಶ ನೀಡಿತ್ತು.

2018ರ ಆದೇಶ ಪ್ರಶ್ನಿಸಿ ಮಾಗರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಿ.ವಿ. ಭಡಾಂಗ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿ ಈ ಆದೇಶ ನೀಡಿದೆ. ಆದರೆ, ಮೇಲ್ಮನವಿ ಸಲ್ಲಿಸಲು ಮತ್ತು ಇತರ ಕಾನೂನಾತ್ಮಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಈ ಆದೇಶ ಜಾರಿಗೊಳಿಸದಂತೆ ನಾಲ್ಕು ವಾರಗಳ ತಡೆಯಾಜ್ಞೆಯನ್ನು ಪೀಠವು ನೀಡಿದೆ.

ADVERTISEMENT

2017ರಲ್ಲಿ ಸೊಲ್ಲಾಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಮಾಗರ್‌ ಮತ್ತು ಇತರ ಮೂವರು 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ನಾಮಪತ್ರಗಳಿಗೆ ಆಗ ಯಾರೂ ಆಕ್ಷೇಪ ಸಲ್ಲಿಸಿರಲಿಲ್ಲ. ನಂತರ, 2017ರ ಫೆಬ್ರುವರಿ 23ರಂದು ಮಾಗರ್‌ ಅವರು 4,955 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇವರ ಸಮೀಪದ ಪ್ರತಿಸ್ಫರ್ಧಿ ಭಾಗ್ಯಲಕ್ಷ್ಮಿ ಮಹಾಂತಾ ಅವರು 3,422 ಮತಗಳನ್ನು ಪಡೆದಿದ್ದರು.

ಮಾಗರ್‌ ಅವರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಈ ಮೂಲಕ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಬಾರದು ಎನ್ನುವ ನಿಯಮ ಉಲ್ಲಂಘಿಸಿದ್ದಾರೆ. ಆದ್ದರಿಂದ, ಮಾಗರ್‌ ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ಕೋರಿ ಸೊಲ್ಲಾಪುರ ನ್ಯಾಯಾಲಯಕ್ಕೆ ಮಹಾಂತಾ ಅವರು ಅರ್ಜಿ ಸಲ್ಲಿಸಿದ್ದರು.

ಬಾಂಬೆ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ ಮತ್ತು ರಾಜ್ಯ ಚುನಾವಣೆ ಆಯೋಗದ ನಿಯಮಾವಳಿಗಳನ್ನು ಅವರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.

‘ನನಗೆ ಇಬ್ಬರೇ ಮಕ್ಕಳಿದ್ದಾರೆ. ಮೂರನೇ ಮಗು ಸೋದರ ಮಾವನದ್ದು. ಆಸ್ಪತ್ರೆಯಲ್ಲಿ ಮಾಡಿದ ತಪ್ಪಿನಿಂದಾಗಿ ನನ್ನ ಮತ್ತು ಪತಿಯ ಹೆಸರು ಬರೆಯಲಾಗಿದೆ. 2012ರಲ್ಲಿ ಜನ್ಮ ಪ್ರಮಾಣಪತ್ರದಲ್ಲಿ ಈ ತಪ್ಪು ಸರಿಪಡಿಸಲಾಗಿತ್ತು’ ಎಂದು ಮಾಗರ್‌ ನ್ಯಾಯಾಲಯಕ್ಕೆ ವಿವರಿಸಿದ್ದರು.

ಆದರೆ, ಮಾಗರ್‌ ಅವರ ಪತಿ 2012ರಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾದಾಗ ಹೆಸರು ಸರಿಪಡಿಸಿರುವ ಅಂಶವನ್ನು ಹೈಕೋರ್ಟ್‌ ಪರಿಗಣಿಸಿತು. ಜತೆಗೆ, ಮೂರನೇ ಮಗು ತನ್ನದಲ್ಲ ಎನ್ನುವುದಕ್ಕೆ ಯಾವುದೇ ರೀತಿಯ ಸಾಕ್ಷ್ಯಗಳನ್ನು ಒದಗಿಸಿಲ್ಲ ಮತ್ತು ಮಗುವಿನ ತಂದೆ ಯಾರು ಎನ್ನುವುದನ್ನು ಪರೀಕ್ಷೆ ಮಾಡಿಸಿರುವ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹೀಗಾಗಿ, ಸೊಲ್ಲಾಪುರ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ಲೋಪ ಇಲ್ಲ ಎಂದು ಹೇಳಿದ ಹೈಕೋರ್ಟ್‌, ಮಾಗರ್‌ ಅವರ ಅರ್ಜಿಯನ್ನು ವಜಾಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.