ADVERTISEMENT

ವಲಸೆ ಕಾರ್ಮಿಕರ ಸಂಕಷ್ಟ;1,000 ಕಿಮೀ ಕ್ರಮಿಸಿದಾಗ ಜೇಬಲ್ಲಿ ಉಳಿದಿದ್ದು ಬರೀ ₹10

ಏಜೆನ್ಸೀಸ್
Published 12 ಮೇ 2020, 10:15 IST
Last Updated 12 ಮೇ 2020, 10:15 IST
ಲಖನೌದಲ್ಲಿ ವಲಸೆ ಕಾರ್ಮಿಕರ ಕುಟುಂಬ (ಪಿಟಿಐ)
ಲಖನೌದಲ್ಲಿ ವಲಸೆ ಕಾರ್ಮಿಕರ ಕುಟುಂಬ (ಪಿಟಿಐ)   

ಲಖನೌ: ಓಂ ಪ್ರಕಾಶ್, ವಯಸ್ಸು 20. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದ ಈತ ಬಿಹಾರ್‌ನ ಸರಾಣ್‌‌ನಲ್ಲಿರುವ ಮನೆಗೆ ತಲುಪಲು 1,000 ಕಿಮೀ ಕ್ರಮಿಸಿದ್ದಾನೆ. ಆಗ್ರಾ ತಲುಪಲು 200 ಕಿಮೀ ಕಾಲ್ನಡಿಗೆ, ಅಲ್ಲಿಂದ ಟ್ರಕ್ ಮೂಲಕ ಲಖನೌಗೆ ಬಂದೆ. ಟ್ರಕ್‌ ಡ್ರೈವರ್‌ಗೆ ಹಣ ನೀಡಿದಾಗ ನನ್ನ ಕೈಯಲ್ಲಿ ಉಳಿದದ್ದು ಬರೀ ₹10 ಎಂದು ಸುದ್ದಿಮಾಧ್ಯಮವೊಂದರಲ್ಲಿ ಮಾತನಾಡಿದ ಓಂ ಪ್ರಕಾಶ್ ಹೇಳಿದ್ದಾನೆ.

ಆಗ್ರಾದಿಂದ ಲಖನೌಗೆ ತಲುಪಲು ನಾನು ₹400 ನೀಡಿದೆ.ಅಲ್ಲಿಂದ ಮುಂದೆ ಏನು ಎಂಬುದು ತಿಳಿದಿಲ್ಲ ಎಂದು ಈತ ನಿಸ್ಸಹಾಯಕನಾಗಿ ಹೇಳುತ್ತಾನೆ.

ಘಟನೆ -2
200 ಮೀಟರ್ ದೂರದಲ್ಲಿ ಪೊಲೀಸರು ಲಖನೌಗೆ ಹೋಗುತ್ತಿರುವ ಖಾಲಿ ಟ್ರಕ್‍ ಒಂದನ್ನು ನಿಲ್ಲಿಸಿ ಇವರನ್ನು ಹತ್ತಿರದ ರೈಲ್ವೆ ನಿಲ್ದಾಣದ ಬಳಿ ಇಳಿಸಿ. ಅಲ್ಲಿಂದ ಬಸ್‌ಗಳಿವೆ, ಅವರಿಗೆ ವ್ಯವಸ್ಥೆ ಮಾಡಿಕೊಡಲಾಗುವುದು. ಅವರನ್ನು ಬೇರೆಲ್ಲಿಗೂ ಕರೆದುಕೊಂಡು ಹೋಗುವುದು ಬೇಡ ಎಂದು ಪೊಲೀಸ್ ಟ್ರಕ್ ಡ್ರೈವರ್‌ಗೆ ಹೇಳುತ್ತಾರೆ. ಹಲವಾರು ವಲಸೆ ಕಾರ್ಮಿಕರು ಟ್ರಕ್‌ ಏರಿ ಲಖನೌದತ್ತ ಪಯಣ ಬೆಳೆಸುತ್ತಾರೆ.

ADVERTISEMENT

ಓಂ ಪ್ರಕಾಶ್‌ನಂತೆ ಹಲವಾರು ವಲಸೆ ಕಾರ್ಮಿಕರು ಲಖನೌ ಬಳಿ ತಲುಪಿ, ಅಲ್ಲಿಂದ ತಮ್ಮ ಊರಿಗೆ ಮರಳಲು ನೂರಾರು ಕಿಮೀ ನಡೆಯುತ್ತಾರೆ. ಹಲವಾರು ಮಂದಿ ಟ್ರಕ್ ಚಾಲಕರಿಗೆ ದೊಡ್ಡ ಮೊತ್ತವನ್ನು ನೀಡಿ ಊರಿನತ್ತ ಹೊರಟರೆ ಇನ್ನು ಕೆಲವರ ಕೈ ಖಾಲಿಯಾಗಿದೆ. ಮನೆ ಸೇರಲು ನೂರು ಕಿಮೀಗಳು ನಡೆಯಲೇ ಬೇಕಾದ ಪರಿಸ್ಥಿತಿ.

ಘಟನೆ-3
ಸ್ವಲ್ಪ ದೂರದಲ್ಲಿ ಮಹೇಂದರ್ ಕುಮಾರ್ ಎಂಬ ಟ್ರಕ್ ಚಾಲಕ ತನ್ನ ಟ್ರಕ್ ಕೆಳಗಡೆ ದಾಲ್-ಬಾತಿ ಅಡುಗೆ ಮಾಡುತ್ತಿರುವುದು ಕಾಣಿಸಿತು.ಜತೆಗಿದ್ದ ಸಹಾಯಕ ಮತ್ತು ಆಗ್ರಾದಿಂದ ಲಖನೌಗೆ ಟ್ರಕ್‌ನಲ್ಲಿ ಬಂದಿರುವ 30 ವಲಸೆ ಕಾರ್ಮಿಕರಿಗೂ ಆತ ಆಹಾರ ಬೇಯಿಸಿ ನೀಡುತ್ತಿದ್ದ.ಇದಕ್ಕಾಗಿ ಆತ ಹಣ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಎಲ್ಲರೂ ಹಣ ಪಡೆಯುವಾಗ ನೀವು ಯಾಕೆ ಹಣ ಪಡೆಯುವುದಿಲ್ಲ? ಎಂದು ಕೇಳಿದರೆ ನನ್ನ ಆತ್ಮಸಾಕ್ಷಿ ಅದಕ್ಕೆ ಒಪ್ಪುತ್ತಿಲ್ಲ ಎಂದು ಉತ್ತರಿಸಿದ್ದಾನೆ.ಅವರನ್ನು ನೋಡಿದರೆ ಯಾರಿಗಾದರೂ ಕನಿಕರ ಹುಟ್ಟುತ್ತದೆ, ರಸ್ತೆಯಲ್ಲಿ ನಡೆಯುತ್ತಿರುವ ಜನರ ಸಂಖ್ಯೆ ಏನೂ ಕಡಿಮೆ ಇಲ್ಲ, ಸಾವಿರದಷ್ಟು ಇರಬಹುದು ಅಂತಾರೆ ಕುಮಾರ್.

ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿ ಕೆಲಸವಿಲ್ಲದೆ.ಕೈಯಲ್ಲಿ ಕಾಸಿಲ್ಲದೆ ಲಕ್ಷದಷ್ಟು ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಕೆಲವೊಂದು ರಾಜ್ಯಗಳು ಉಚಿತ ಬಸ್ ವ್ಯವಸ್ಥೆ ಮಾಡಿದರೆ ಇನ್ನು ಕೆಲವೆಡೆ ಹಣ ಪಾವತಿ ಮಾಡಿ ಬಸ್‌ಗಳಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗಿದೆ. ಬೇರೇನೂ ಗತಿ ಇಲ್ಲದೆ ಸಾವಿರಾರು ಮಂದಿ ತಮ್ಮ ಮನೆಗೆ ಸೈಕಲ್‌ನಲ್ಲಿ, ಕಾಲ್ನಡಿಗೆಯಲ್ಲೇ ಸಾವಿರ ಕಿಮೀ ಕ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.