ADVERTISEMENT

ಆಂಧ್ರದಲ್ಲಿ ಚಂಡಮಾರುತ: ರೈತರ ಪ್ರತಿಭಟನೆಗೆ ಅಡ್ಡಿಯಾದ ಮಳೆ

ಪಿಟಿಐ
Published 27 ಸೆಪ್ಟೆಂಬರ್ 2021, 6:30 IST
Last Updated 27 ಸೆಪ್ಟೆಂಬರ್ 2021, 6:30 IST
ಗುಲಾಬ್‌ ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿರುಗಾಳಿಗೆ ಉರುಳಿರುವ ಮರಗಳನ್ನು ತೆರವುಗೊಳಿಸುತ್ತಿರುವ ಪೊಲೀಸರು.
ಗುಲಾಬ್‌ ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿರುಗಾಳಿಗೆ ಉರುಳಿರುವ ಮರಗಳನ್ನು ತೆರವುಗೊಳಿಸುತ್ತಿರುವ ಪೊಲೀಸರು.   

ಅಮರಾವತಿ: ಆಂಧ್ರಪ್ರದೇಶದಾದ್ಯಂತ ಸೋಮವಾರ ನಸುಕಿನಿಂದಲೇ ಭಾರಿ ಮಳೆ ಸುರಿದ ಪರಿಣಾಮ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಅಡ್ಡಿ ಉಂಟಾಯಿತು.

ಆಂದ್ರಪ್ರದೇಶದ ಶ್ರೀಕಾಕುಳಂನಿಂದ ಹಿಡಿದು ಕರಾವಳಿ ಜಿಲ್ಲೆಗಳಲ್ಲಿ ‘ಗುಲಾಬ್‌‘ ಚಂಡಮಾರುತ ಅಪ್ಪಳಿಸಿದ ಕಾರಣ ಬೆಳಿಗ್ಗೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ದು, ಜನರು ಮನೆಯಲ್ಲೇ ಉಳಿಯುವಂತಾಗಿದೆ. ರಾಯಲಸೀಮೆಯ ಕೆಲವು ಜಿಲ್ಲೆಗಳಲ್ಲಿ ಚಂಡಮಾರುತ ಪರಿಣಾಮ ಬೀರಿದೆ.

‘ಭಾರತ್‌ ಬಂದ್‌‘ ಭಾಗವಾಗಿ ರೈತ ಸಂಘಟನೆಗಳು ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಕರೆ ನೀಡಿದ್ದ ಪ್ರತಿಭಟನೆಗಳು ಭಾರಿ ಮಳೆಯ ಕಾರಣ ಆರಂಭವಾಗಲಿಲ್ಲ.

ADVERTISEMENT

ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರಾಷ್ಟ್ರದಾದ್ಯಂತ 40 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ ಸೋಮವಾರ 10 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ಕರೆ ನೀಡಿದ್ದ ‘ಭಾರತ್ ಬಂದ್‌‘ಗೆ ರಾಜ್ಯದ ಎನ್‌ಡಿಎಯೇತರ ಪಕ್ಷಗಳು ಬೆಂಬಲ ಸೂಚಿಸಿದ್ದವು.

ವೈಎಸ್‌ಆರ್‌ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸೋಮವಾರ ಆರ್‌ಟಿಸಿ ಸಾರಿಗೆ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಿತ್ತು ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿತ್ತು. ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಕೂಡ, ಕಾಂಗ್ರೆಸ್‌ ಮತ್ತು ಎಡಪಕ್ಷಗಳೊಂದಿಗೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.