ADVERTISEMENT

ಧಾರಾಕಾರ ಮಳೆ | ಉತ್ತರ ಭಾರತದಲ್ಲಿ 7 ಮಂದಿ ಸಾವು; ದೆಹಲಿಯಲ್ಲಿ ರೆಡ್‌ ಅಲರ್ಟ್‌

ದೆಹಲಿಯಲ್ಲಿ 200 ವಿಮಾನ ಸಂಚಾರ ತಡ, ವಿದ್ಯುತ್‌ ಸ್ಥಗಿತ

ಪಿಟಿಐ
Published 2 ಮೇ 2025, 13:09 IST
Last Updated 2 ಮೇ 2025, 13:09 IST
<div class="paragraphs"><p>ಭಾರಿ ಮಳೆಯಿಂದಾಗಿ ದೆಹಲಿ– ಗುರುಗ್ರಾಮ ಎಕ್ಸ್‌ಪ್ರೆಸ್‌ ವೇ ಶುಕ್ರವಾರ ಮುಂಜಾನೆ ಜಲಾವೃತಗೊಂಡಿತ್ತು</p></div>

ಭಾರಿ ಮಳೆಯಿಂದಾಗಿ ದೆಹಲಿ– ಗುರುಗ್ರಾಮ ಎಕ್ಸ್‌ಪ್ರೆಸ್‌ ವೇ ಶುಕ್ರವಾರ ಮುಂಜಾನೆ ಜಲಾವೃತಗೊಂಡಿತ್ತು

   

– ಪಿಟಿಐ ಚಿತ್ರ 

  • ರಸ್ತೆಗಳು ಜಲಾವೃತವಾಗಿದ್ದು ತೀವ್ರ ಸಂಚಾರ ದಟ್ಟಣೆ

    ADVERTISEMENT
  • ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಮೂವರು ಮೃತ

  • ದೆಹಲಿಯಲ್ಲಿ ರೆಡ್‌ ಅಲರ್ಟ್‌

ನವದೆಹಲಿ/ಗುರುಗ್ರಾಮ/ಚಂಡೀಗಢ/ಲಖನೌ/ಶಿಮ್ಲಾ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಶುಕ್ರವಾರ ಮುಂಜಾನೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಉಂಟಾದ ಅವಘಡಗಳಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ. 

ದೆಹಲಿ, ಗುರುಗ್ರಾಮ, ಫರೀದಾಬಾದ್‌ ಹಾಗೂ ಮಥುರಾ ಸೇರಿದಂತೆ ಪ್ರಮುಖ ನಗರಗಳ ರಸ್ತೆಗಳು ಮಳೆಯಿಂದಾಗಿ ಬಹುತೇಕ ಜಲಾವೃತಗೊಂಡು, ಮರಗಳು ಧರೆಗುರುಳಿದ ಕಾರಣ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ದೆಹಲಿಯ ನಜಾಫಗಡದಲ್ಲಿ ಮನೆಯ ಮೇಲೆ ಮರವೊಂದು ಬಿದ್ದ ಪರಿಣಾಮ ಮನೆ ಕುಸಿದು ತಾಯಿ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಮಹಿಳೆಯ ಪತಿ ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಉತ್ತರ ಪ್ರದೇಶದಲ್ಲಿ ಪ್ರತ್ಯೇಕ ಘಟನೆಗಳಲ್ಲಿ, 17 ವರ್ಷದ ಬಾಲಕಿ ಸೇರಿದಂತೆ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ.

ಬೆಳೆ ಹಾನಿ ವರದಿಗೆ ಯೋಗಿ ಆದೇಶ: ಮಳೆಯಿಂದಾಗಿ ಹಲವೆಡೆ ಅವಘಡಗಳು ಸಂಭವಿಸುತ್ತಿದ್ದಂತೆ, ಕೂಡಲೇ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಳೆ ಹಾನಿ ಕುರಿತು ರಾಜ್ಯ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸುವಂತೆಯೂ ಅವರು ಆದೇಶಿಸಿದ್ದಾರೆ. 

ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಇತರ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಹವಾಮಾನ ಇಲಾಖೆಯು ಮುಂದಿನ ಗುರುವಾರದವರೆಗೆ ಹಲವೆಡೆ ಆರೆಂಜ್‌ ಮತ್ತು ಯೆಲ್ಲೊ ಅಲರ್ಟ್‌ ಘೋಷಿಸಿದೆ. 

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಪಂಜಾಬ್‌ ಮತ್ತು ಹರಿಯಾಣಗಳ ಅನೇಕ ಕಡೆ ತಾಪಮಾನವು ಕುಸಿದಿದೆ. 

ಬಿರುಗಾಳಿ ಸಹಿತ ಮಳೆಯಿಂದಾಗಿ ದೆಹಲಿಯ ಶೇಖ್ ಸಾರೈ ನಗರದಲ್ಲಿ ಮರವೊಂದು ಬೇರು ಸಮೇತ ಧರೆಗುರುಳಿದ್ದರಿಂದ ಕಾರುಗಳಿಗೆ ಹಾನಿಯಾಯಿತು

ದೆಹಲಿಯಲ್ಲಿ ರೆಡ್‌ ಅಲರ್ಟ್

ಮೂರು ಗಂಟೆ ಅವಧಿಯಲ್ಲಿ 77 ಮೀ.ಮೀ. ಮಳೆ ಸುರಿದಿದ್ದು ಹವಾಮಾನ ಇಲಾಖೆಯು ನಗರದಾದ್ಯಂತ ರೆಡ್‌ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮ ಕೈಗೊಂಡು ಜಾಗರೂಕರಾಗಿರುವಂತೆಯೂ ಜನರಿಗೆ ಸೂಚನೆ ನೀಡಿದೆ.  ಮಳೆ ಸಂಬಂಧಿ ಅವಘಡಗಳ ಕುರಿತು ದೆಹಲಿ ಅಗ್ನಿಶಾಮಕ ದಳವು 3–4 ಗಂಟೆ ಅವಧಿಯಲ್ಲಿ ಸುಮಾರು 100 ಕರೆಗಳನ್ನು ಸ್ವೀಕರಿಸಿದೆ. ಜಲಾವೃತಕ್ಕೆ ಸಂಬಂಧಿಸಿದ 100 ದೂರುಗಳನ್ನು ಸ್ವೀಕರಿಸಲಾಗಿದ್ದು ಸಮಸ್ಯೆ ಬಗೆಹರಿಸಲು 150 ತ್ವರಿತ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಯಿತು ಎಂದು ಲೋಕೋಪಯೋಗಿ ಇಲಾಖೆಯು ತಿಳಿಸಿದೆ.  ಹಲವೆಡೆ ಮರಗಳು ಉರುಳಿ ವಿದ್ಯುತ್‌ ತಂತಿಗಳಿಗೆ ಹಾನಿಯುಂಟಾದ ಕಾರಣ ತಾತ್ಕಾಲಿಕವಾಗಿ ವಿದ್ಯುತ್‌ ‍ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.