ADVERTISEMENT

ಗುಜರಾತ್‌–ಮಹಾರಾಷ್ಟ್ರದಲ್ಲಿ ಭಾರಿ ಮಳೆ: 9 ಮಂದಿ ಸಾವು

ಪಿಟಿಐ
Published 12 ಜುಲೈ 2022, 14:05 IST
Last Updated 12 ಜುಲೈ 2022, 14:05 IST
ನಾಸಿಕ್‌ನಲ್ಲಿ ಪ್ರವಾಹ
ನಾಸಿಕ್‌ನಲ್ಲಿ ಪ್ರವಾಹ    

ಅಹಮದಾಬಾದ್‌/ಮುಂಬೈ/ಪಾಲ್ಗರ್‌ : ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು, ಮಂಗಳವಾರ 9 ಮಂದಿ ಮೃತಪಟ್ಟಿದ್ದಾರೆ.

‘ಗುಜರಾತ್‌ನ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹಿಂದಿನ 24 ಗಂಟೆಗಳಲ್ಲಿ 6 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಜೂನ್‌ 1ರಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 69ಕ್ಕೆ ಹೆಚ್ಚಿದೆ. ಒಟ್ಟು 27,896 ಮಂದಿಯನ್ನು ನೆರೆಪೀಡಿತ ಪ್ರದೇಶಗಳಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಸಚಿವ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.

‘ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ನೆರೆಪೀಡಿತ ಬೊಡೇಲಿ ನಗರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಇತರ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನೂ ಕೈಗೊಂಡಿದ್ದಾರೆ’ ಎಂದು ಮುಖ್ಯಮಂತ್ರಿಯವರ ಕಾರ್ಯಾಲಯ ತಿಳಿಸಿದೆ.

ADVERTISEMENT

‘ಅಂಜಾರ್‌ ತಾಲ್ಲೂಕಿನಲ್ಲಿ ಆರು ಗಂಟೆಗಳಲ್ಲಿ 167 ಮಿ.ಮೀ.ಮಳೆಯಾಗಿದೆ. ಗಾಂಧಿಧಾಮ ತಾಲ್ಲೂಕಿನಲ್ಲಿ 145 ಮಿ.ಮೀ.ಮಳೆ ಸುರಿದಿದೆ. ಹಲವು ಪ್ರದೇಶಗಳಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಭಾರಿ ಮಳೆಯಿಂದಾಗಿ ಮೂವರು ಮೃತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ 95 ಮಂದಿಯನ್ನು ಸ್ಥಳಾಂತರಿಸಲಾಗಿದೆ’ ಎಂದು ಮಹಾರಾಷ್ಟ್ರ ಸರ್ಕಾರ ಮಂಗಳವಾರ ತಿಳಿಸಿದೆ.

‘ಎನ್‌ಡಿಆರ್‌ಎಫ್‌ನ 13, ಎಸ್‌ಡಿಆರ್‌ಎಫ್‌ನ 3 ತಂಡಗಳನ್ನು ನೆರೆಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಕೆಲವೆಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಜನಜೀವನವೂ ಅಸ್ತವ್ಯಸ್ತಗೊಂಡಿದೆ’ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

‘ನಾಸಿಕ್‌, ಪಾಲ್ಗರ್‌ ಮತ್ತು ಪುಣೆ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ನಾಸಿಕ್‌ನಲ್ಲಿ ಮಂಗಳವಾರವೂ ಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ನಾಸಿಕ್‌ನಲ್ಲಿ 97.4 ಮಿ.ಮೀ, ಮುಂಬೈನಲ್ಲಿ 109.9 ಮಿ.ಮೀ ಹಾಗೂ ಥಾಣೆಯಲ್ಲಿ 106.3 ಮಿ.ಮೀ.ಮಳೆಯಾಗಿದೆ’ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಪಾಲ್ಗರ್‌ನ ಜವಾಹರ ತಾಲ್ಲೂಕಿನಲ್ಲಿ ಹಿಂದಿನ 24 ಗಂಟೆಗಳಲ್ಲಿ ಗರಿಷ್ಠ 146 ಮಿ.ಮೀ.ಮಳೆ ದಾಖಲಾಗಿದೆ. 7 ಮನೆಗಳಿಗೆ ಹಾನಿಯಾಗಿದೆ. ಪಾಲ್ಗರ್‌ನಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.