ADVERTISEMENT

ಗುಲಾಬ್ ಅಬ್ಬರದಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆ: 13 ಸಾವು, 560 ಮಂದಿ ರಕ್ಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 2:07 IST
Last Updated 29 ಸೆಪ್ಟೆಂಬರ್ 2021, 2:07 IST
ಮಹಾರಾಷ್ಟ್ರದಲ್ಲಿ ಮಳೆ –ಪಿಟಿಐ ಚಿತ್ರ
ಮಹಾರಾಷ್ಟ್ರದಲ್ಲಿ ಮಳೆ –ಪಿಟಿಐ ಚಿತ್ರ   

ಮುಂಬೈ: ಗುಲಾಬ್‌ ಚಂಡಮಾರುತದ ಪರಿಣಾಮ ಮಹಾರಾಷ್ಟ್ರದ ಮರಾಠವಾಡ ಸೇರಿದಂತೆ ಹಲವೆಡೆ ಭಾರಿ ಮಳೆ, ಪ್ರವಾಹ ಉಂಟಾಗಿದೆ. ಮಳೆ, ಸಿಡಿಲು ಹಾಗೂ ಸಂಬಂಧಿತ ಅವಘಡಗಳಲ್ಲಿ ಈವರೆಗೆ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. 560ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ವಿದರ್ಭ ಪ್ರದೇಶ, ಯಾವತ್ಮಲ್ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಹಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಯಾವತ್ಮಲ್ ಜಿಲ್ಲೆಯಲ್ಲಿ ಮಂಗಳವಾರ ರಾಜ್ಯ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಬಸ್‌ವೊಂದು ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಸೇತುವೆಯನ್ನು ದಾಟುವಾಗ ಕೊಚ್ಚಿಹೋಗಿದ್ದು, ಬಸ್‌ ಚಾಲಕ, ಕಂಡಕ್ಟರ್‌ ಹಾಗೂ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದೆ.

ADVERTISEMENT

ಬಸ್‌ ನಾಗಪುರದಿಂದ ನಾಂದೇಡ್‌ಗೆ ಹೋಗುತ್ತಿದ್ದಾಗ ಉಮಾರ್ಖೇಡ್‌ ತೆಹಸಿಲ್‌ನ ದಹಗಾಂವ್‌ ಸೇತುವೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಲತೂರ್‌ನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಬ್ಯಾರೇಜ್‌ಗಳು, ಗ್ರಾಮಗಳು ಮತ್ತು ನದಿಯ ದಡದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಎನ್‌ಡಿಆರ್‌ಎಫ್‌ ತಂಡ, ಹೆಲಿಕಾಪ್ಟರ್‌ ಮತ್ತು ದೋಣಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

ಮರಾಠವಾಡಾ ಪ್ರದೇಶದ ಔರಂಗಾಬಾದ್, ಹಿಂಗೋಲಿ, ಬೀಡ್‌, ಲತೂರ್, ನಾಂದೇಡ್‌, ಒಸ್ಮಾನಾಬಾದ್ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.

ಮರಾಠವಾಡ ಪ್ರದೇಶದಲ್ಲಿ ಇದುವರೆಗೆ 10 ಜನರು ಸಾವಿಗೀಡಾಗಿದ್ದಾರೆ. ಅಪಾರ ಪ್ರಮಾಣ ಬೆಳೆ ಹಾನಿ ಸಂಭವಿಸಿದೆ.

ಮಾಂಜ್ರಾ ಮತ್ತು ಮಜಲಗಾಂವ್ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.