ADVERTISEMENT

ಮಹಿಳೆಯ ತಂದೆಯ ವಂಶಸ್ಥರಿಗೂ ಆಸ್ತಿಯಲ್ಲಿ ಹಕ್ಕು: ‘ಸುಪ್ರೀಂ‘

ಪಿಟಿಐ
Published 25 ಫೆಬ್ರುವರಿ 2021, 8:59 IST
Last Updated 25 ಫೆಬ್ರುವರಿ 2021, 8:59 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ, ಮಹಿಳೆಯ ತಂದೆಯ ಉತ್ತರಾಧಿಕಾರಿಗಳು ಸಹ ಆಕೆ ಹೊಂದಿರುವ ಆಸ್ತಿಯ ಹಕ್ಕುದಾರರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಅಶೋಕಭೂಷಣ್‌ ಹಾಗೂ ಆರ್‌.ಸುಭಾಷ್‌ರೆಡ್ಡಿ ಅವರಿರುವ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿ, ಹಿಂದೂ ಮಹಿಳೆಯ ತಂದೆಯ ಕಡೆಯ ವ್ಯಕ್ತಿಗಳನ್ನು ಸಹ ಆಕೆಯ ಆಸ್ತಿಯ ಉತ್ತರಾಧಿಕಾರಿ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಅಭಿಒಪ್ರಾಯಪಟ್ಟಿದೆ.

ಜಗ್ನೊ ಎಂಬ ಮಹಿಳೆಗೆ ಸೇರಿದ ಆಸ್ತಿಯನ್ನು ಹಂಚಿಕೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ಹೇಳಿದೆ.

ADVERTISEMENT

ಪತಿ ಶೇರ್‌ ಸಿಂಗ್‌ ಮರಣ ಹೊಂದಿದ ನಂತರ, ಜಗ್ನೊ ಅವರು ತನ್ನ ಸಹೋದರರ ಮಕ್ಕಳಿಗೆ ತನ್ನ ಆಸ್ತಿಯನ್ನು ಹಂಚಿದ್ದರು. ಇದನ್ನು ಪ್ರಶ್ನಿಸಿ ಆಕೆಯ ಬಾಮೈದುನ ಕೋರ್ಟ್‌ ಮೆಟ್ಟಿಲೇರಿದ್ದರು.

‘ಪತಿಯ ಮರಣದ ನಂತರ ಆತ ಹೊಂದಿದ್ದ ಆಸ್ತಿಗೆ ಜಗ್ನೊ ಉತ್ತರಾಧಿಕಾರಿಯಾಗಿದ್ದಾರೆ. ಆಕೆ ತನ್ನ ಸಹೋದರರ ಮಕ್ಕಳಿಗೆ ಆಸ್ತಿಯನ್ನು ಹಂಚಿಕೆ ಮಾಡಿದ್ದರಲ್ಲಿ ಏನೂ ತಪ್ಪಿಲ್ಲ. ಆಸ್ತಿಯನ್ನು ಪಡೆದವರನ್ನು ಇಲ್ಲಿ ಅಪರಿಚಿತರು ಎಂದು ವ್ಯಾಖ್ಯಾನಿಸುವುದು ಸರಿಯಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಮಹಿಳೆಯ ಬಾಮೈದುನ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.