ADVERTISEMENT

Plane Crash: ಮೊಬೈಲ್‌ ರಿಂಗಣಿಸುತ್ತಿದ್ದರೂ.. ಕರೆ ಸ್ವೀಕರಿಸುತ್ತಿಲ್ಲ..

ಪಿಟಿಐ
Published 12 ಜೂನ್ 2025, 19:01 IST
Last Updated 12 ಜೂನ್ 2025, 19:01 IST
<div class="paragraphs"><p>ಕಟ್ಟಡಕ್ಕೆ ಅಪ್ಪಳಿಸಿರುವ ವಿಮಾನ</p></div>

ಕಟ್ಟಡಕ್ಕೆ ಅಪ್ಪಳಿಸಿರುವ ವಿಮಾನ

   

– ರಾಯಿಟರ್ಸ್ ಚಿತ್ರ

ಇಂಫಾಲ್/ಮುಂಬೈ(ಪಿಟಿಐ): ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ನತದೃಷ್ಟ ವಿಮಾನದ ಮಹಿಳಾ ಸಿಬ್ಬಂದಿಯಲ್ಲಿ ಒಬ್ಬರಾದ, ಮಣಿಪುರದ ಥೌಬಾಲ್‌ ಜಿಲ್ಲೆಯ ಕೊಂಗಬ್ರಾಯಿಲಾಟ್ಪಮ್ ನಗನಥೋಯಿ ಶರ್ಮಾ ಅವರ ಕುಟುಂಬ ಸದಸ್ಯರಲ್ಲಿಯೂ ಆತಂಕ ಮನೆ ಮಾಡಿದೆ. ಆದರೆ, ಆಕೆ ಬದುಕುಳಿದಿರುವ ಕುರಿತ ಭರವಸೆಯನ್ನು ಇನ್ನೂ ಕಳೆದುಕೊಂಡಿಲ್ಲ.

ADVERTISEMENT

ಈ ಅಪಘಾತದಲ್ಲಿ ಮೃತಪಟ್ಟವರ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ. ಅಲ್ಲದೇ, ಶರ್ಮಾ ಅವರ ಮೊಬೈಲ್‌ ಸ್ವಿಚ್‌ ಆನ್‌ ಇದ್ದು, ಕರೆ ಹೋಗುತ್ತಿರುವುದೇ ಈ ಭರವಸೆಗೆ ಕಾರಣ.

21 ವರ್ಷದ ಶರ್ಮಾ, ಮೂರು ವರ್ಷಗಳಿಂದ ಏರ್‌ ಇಂಡಿಯಾ ವಿಮಾನ ಕ್ಯಾಬಿನ್‌ ಕ್ರೂ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ, ಅವರ ತವರು ಅವಾಂಗ್ ಲೀಕಾಯ್‌ನಲ್ಲಿ ಮೌನ ಮಡುಗಟ್ಟಿದೆ.

‘ವಿಮಾನ ಪತನದ ಸುದ್ದಿ ಕೇಳಿದ ನಂತರ, ನಾವು ಹಲವು ಬಾರಿ ಆಕೆಯ ಮೊಬೈಲ್‌ಗೆ ಕರೆ ಮಾಡಿದೆವು. ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸೇವೆಯೂ ಇದೆ. ಮೊಬೈಲ್‌ ರಿಂಗ್‌ ಆಗುತ್ತಿದ್ದರೂ ಯಾರೂ ಕರೆ ಸ್ವೀಕರಿಸುತ್ತಿಲ್ಲ. ನಿರಂತರವಾಗಿ ಕರೆ ಮಾಡಿದಲ್ಲಿ ಮೊಬೈಲ್‌ ಬ್ಯಾಟರಿ ಖಾಲಿ ಆಗುವ ಭಯದಿಂದ ಸಂಜೆ 6ರ ನಂತರ ಕರೆ ಮಾಡುವುದನ್ನು ನಿಲ್ಲಿಸಿದೆವು’ ಎಂದು ಶರ್ಮಾ ಅವರ ಸಂಬಂಧಿ ಕೆ.ಖೆಂಜಿತಾ ಹೇಳಿದರು.

‘ನಾನು ಲಂಡನ್‌ಗೆ ತೆರಳುತ್ತಿರುವೆ. ಕೆಲವೇ ಕ್ಷಣಗಳಲ್ಲಿ ವಿಮಾನ ಟೇಕಾಫ್‌ ಆಗಲಿದೆ. ಕೆಲ ಸಮಯದವರೆಗೆ ನಾವು ಮಾತನಾಡಲು ಆಗುವುದಿಲ್ಲ’ ಎಂಬುದು ಆಕೆಯ ಕೊನೆ ಸಂದೇಶವಾಗಿತ್ತು’ ಎಂದೂ ಖೆಂಜಿತಾ ಹೇಳಿದರು.

‘ಗುಡ್‌ ಮಾರ್ನಿಂಗ್ ಹೇಳಿದ್ದ..’: ‘ಲಂಡನ್‌ಗೆ ಹೊರಟಿದ್ದ ವಿಮಾನವು ಪತನಗೊಳ್ಳುವುದಕ್ಖೂ ಮುನ್ನ, ನನ್ನ ಸಹೋದರ ತಾಯಿಯೊಂದಿಗೆ ಮಾತನಾಡಿ,‘ಗುಡ್ ಮಾರ್ನಿಂಗ್’ ಎಂದು ಹೇಳಿದ್ದ. ಇದೇ ಆತನ ಕೊನೆಯ ಮಾತುಗಳು...’

ನತದೃಷ್ಟ ವಿಮಾನದ ಕ್ಯಾಬಿನ್‌ ಕ್ರೂ ಸದಸ್ಯರಾಗಿದ್ದ ದೀಪಕ್‌ ಪಾಠಕ್ ಅವರ ಸಹೋದರಿ ಹೇಳುವ ಮಾತಿದು.

‘ದೀಪಕ್‌ ಸ್ಥಿತಿ ಅಥವಾ ಆತ ಎಲ್ಲಿದ್ಧಾನೆ ಎಂಬ ಬಗ್ಗೆ ಈ ವರೆಗೆ ಅಧಿಕೃತ ಮಾಹಿತಿಯೇ ಇಲ್ಲ’ ಎಂದೂ ಆಕೆ ಹೇಳಿದ್ದಾರೆ. ದೀಪಕ್ ಅವರು ಠಾಣೆ ಜಿಲ್ಲೆಯ ಬದ್ಲಾಪುರ ನಿವಾಸಿ. ಕಳೆದ 11 ವರ್ಷಗಳಿಂದ ಏರ್‌ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.