ADVERTISEMENT

ಪಶ್ಚಿಮ ಬಂಗಾಳ: ರೈಲ್ವೆ ಸೇತುವೆಗಳಿಗಿಂತ ಪಾರಂಪರಿಕ ಮರಗಳೇ ಹೆಚ್ಚು ಉಪಯುಕ್ತ

ಸುಪ್ರೀಂ ಕೋರ್ಟ್‌ಗೆ ವಿವರಿಸಿದ ಡಾ. ಸೊಹಮ್‌ ಪಾಂಡ್ಯ ನೇತೃತ್ವದ ತಜ್ಞರ ಸಮಿತಿ

ಪಿಟಿಐ
Published 4 ಫೆಬ್ರುವರಿ 2021, 10:25 IST
Last Updated 4 ಫೆಬ್ರುವರಿ 2021, 10:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಐದು ರೈಲ್ವೆ ಸೇತುವೆಗಳ ನಿರ್ಮಾಣಕ್ಕಾಗಿ ಕತ್ತರಿಸುತ್ತಿರುವ ಮುನ್ನೂರು ಪಾರಂಪರಿಕ ಮರಗಳ ಒಟ್ಟು ಮೌಲ್ಯ ಈ ಅಭಿವೃದ್ಧಿ ಯೋಜನೆಗಳ ಮೌಲ್ಯಕ್ಕಿಂತ ಅಧಿಕವಾಗಿದ್ದು, ಅವುಗಳನ್ನು ತೆರವುಗೊಳಿಸಬಾರದು ಎಂದು ತಜ್ಞರ ಸಮಿತಿಯೊಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರನ್ನೊಳಗೊಂಡ ಪೀಠದ ಎದುರು ಈ ವಿವರವನ್ನು ಮಂಡಿಸಿದ ಐದು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿ, ಪಾರಂಪರಿಕ ಮರಗಳು ಬೃಹದಾಕಾರದಲ್ಲಿರುತ್ತವೆ. ಈ ಮರಗಳು ಪರಿಪಕ್ವವಾಗಲು ದಶಕಗಳೋ, ಶತಮಾನಗಳೋ ಬೇಕಾಗುತ್ತದೆ. ಇವು ನಾಗರಿಕ ಸಮಾಜ ಮತ್ತು ಪರಿಸರಕ್ಕೆ ನೀಡುವ ಸೇವೆ ಬಹು ದೊಡ್ಡದು ಎಂದು ವಿವರಿಸಿದರು.

ವಾರ್ದಾದ ಸೆಂಟರ್ ಆಫ್‌ ಸೈನ್ಸ್ ಫಾರ್ ವಿಲೇಜ್‌ ಸಂಸ್ಥೆಯ ಡಾ. ಸೊಹಮ್‌ ಪಾಂಡ್ಯ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ADVERTISEMENT

ಈ ಮರಗಳು ನೀಡುವ ಆಮ್ಲಜನಕ, ಮಣ್ಣಿಗೆ ನೀಡುವ ಸೂಕ್ಷ್ಮ ಪೋಷಕಾಂಶಗಳು, ಕಾಂಪೋಸ್ಟ್‌ ಮತ್ತು ಜೈವಿಕ ಗೊಬ್ಬರ ಮತ್ತಿತರ ವಸ್ತುಗಳ ಮೌಲ್ಯ ಲಕ್ಷ ಕೋಟಿಗಳಿಗೂ ಹೆಚ್ಚು ಎಂದು ಅಂದಾಜಿಸಬಹುದು. ಇಂಥ ಅಪರೂಪದ ಮರಗಳನ್ನು ಕತ್ತರಿಸುವುದರಿಂದ, ಪರಿಸರಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸಮಿತಿ ತಿಳಿಸಿದೆ.

ಈಗ ಕತ್ತರಿಸುವ ಮರಗಳ ಉಳಿದ ಆಯಸ್ಸಿನ ಮೌಲ್ಯವನ್ನು ಲೆಕ್ಕಹಾಕಿದರೆ, ಪ್ರತಿ ವರ್ಷ ಒಂದು ಮರದಿಂದ ₹74,500 ಆದಾಯವಿದೆ. ಅಂದರೆ, 300 ಮರಗಳನ್ನು ನೂರು ವರ್ಷಗಳ ಅವಧಿವರೆಗೆ ಉಳಿಸಿದರೆ, ₹2,235,000,000 ಮೌಲ್ಯದ ಉತ್ಪನ್ನಗಳನ್ನು ನೀಡುತ್ತವೆ.

ಒಂದು ಪಕ್ಷ 59.2 ಕಿಲೋಮೀಟರ್ ರಸ್ತೆಯನ್ನು ಪರಿಗಣಿಸಿದರೆ, ಇನ್ನು ಒಂದು ದಶಕದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ, ಈ ರಸ್ತೆ ವಿಸ್ತರಿಸಬೇಕಾಗುತ್ತದೆ. ಆಗ ಅಧಿಕಾರಿಗಳು ರಸ್ತೆ ವಿಸ್ತರಣೆ ಮಾಡುತ್ತಾರೆ. ಆಗ 4,056 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಜ್ಞರ ಸಮಿತಿ ಪೀಠಕ್ಕೆ ವಿವರಿಸಿದೆ.

ಆ ಪ್ರಕಾರ, 100 ವರ್ಷಗಳಲ್ಲಿ ಈ ಮರಗಳ ಮೌಲ್ಯ ₹30.21 ಬಿಲಿಯನ್‌. ಹೀಗಾಗಿ, ಇಂಥ ಬೃಹತ್ ಪರಿಸರ ವಿನಾಶವನ್ನು ತಪ್ಪಿಸಿ, ಈ ಅಭಿವೃದ್ಧಿ ಯೋಜನೆಗಳಿಗೆ ಪರ್ಯಾಯ ದಾರಿ ಹುಡುಕುವಂತೆ ತಜ್ಞರ ಸಮಿತಿ ಮನವಿ ಮಾಡಿದೆ.

ಐದು ಪ್ರಸ್ತಾವಿತ ರೈಲ್ವೆ ಸೇತುವೆಗಳು ‘ಸೇತು ಭಾರತಂ ಮೆಗಾ ಯೋಜನೆ‘ಯ ಭಾಗವಾಗಿದೆ. ದೇಶದ 19 ರಾಜ್ಯಗಳಲ್ಲಿ 208 ರೈಲ್ವೆ ಮೇಲು ಸೇತುವೆ ಮತ್ತು ಕೆಳಸೇತುವೆಗಳನ್ನು ಈ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ₹20,800 ಕೋಟಿ ಅನುದಾನ ನೀಡಿದೆ.

‘ಈ ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸಲು ಪರಿಸರ ಪರಿಣಾಮದ ಮೌಲ್ಯಮಾಪನ(ಇಐಎ) ಮಾಡಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಮೌಲ್ಯಮಾಪನವಾಗಿಲ್ಲ‘ ಎಂದು ಐದು ಸದಸ್ಯರ ಸಮಿತಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

‘ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಸುತ್ತೋಲೆ ಪ್ರಕಾರ, 100ಕಿ.ಮೀ ಗಿಂತ ಕಡಿಮೆ ಉದ್ದದ ರಸ್ತೆಗೆ ಪರಿಸರ ಪರಿಣಾಮ ಮೌಲ್ಯಮಾಪನದ ಅಗತ್ಯವಿಲ್ಲ. ಯೋಜನೆಗೆ ಭೂಮಿ ನೀಡುವುದನ್ನು ತಪ್ಪಿಸುವುದಕ್ಕಾಗಿ ಇಂಥ ವಾದ ಮಂಡಿಸಲಾಗುತ್ತಿದೆ‘ ಎಂದು ಸರ್ಕಾರ ತಿಳಿಸಿದೆ

ನ್ಯಾಯಪೀಠ ಈ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.