ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಆಡಿದ ಮಾತುಗಳು ಭಾರಿ ಆಕ್ರೋಶಕ್ಕೆ ಎಡೆಮಾಡಿವೆ. ಹೋರಾಟವನ್ನು ತೀವ್ರಗೊಳಿಸಿರುವ ಇಂಡಿಯಾ ಬಣ ಸಂಸತ್ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದೆ.
ಮಕರ ದ್ವಾರದಿಂದ ಈ ಪ್ರತಿಭಟನಾ ಮೆರವಣಿಗೆ ಸಾಗುತ್ತಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಜೊತೆ ಇಂಡಿಯಾ ಬಣದ ಹಲವು ಸಂಸದರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತಂತೆ ತಾವು ನೀಡಿದ ಹೇಳಿಕೆಗೆ ಅಮಿತ್ ಶಾ ಕ್ಷಮೆಯಾಚಿಸಬೇಕು ಮತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದರು ಒತ್ತಾಯಿಸಿದ್ದಾರೆ.
ಇದೇ ಬೇಡಿಕೆ ಮುಂದಿಟ್ಟುಕೊಂಡು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಂಸದರು, ಬುಧವಾರ ಸಂಸತ್ ಒಳಗೆ ಮತ್ತು ಹೊರಗೆ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಬಿಜೆಪಿಯ ಪ್ರತಿದಾಳಿಯ ನೇತೃತ್ವವನ್ನು ಸ್ವತಃ ಪ್ರಧಾನಿ ವಹಿಸಿಕೊಂಡು, ‘ಎಕ್ಸ್’ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆಪ್ತ ಶಾ ಅವರನ್ನು ಬಲವಾಗಿ ಸಮರ್ಥಿಸಿಕೊಂಡರು. ದಲಿತರ ಆರಾಧಕನನ್ನು ಕಾಂಗ್ರೆಸ್ ಪಕ್ಷವೇ ಅವಮಾನಿಸುತ್ತಿದೆ ಎಂದೂ ಹರಿಹಾಯ್ದರು. ಹಿರಿಯ ಸಚಿವರಾದ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಕೂಡ ತಮ್ಮ ಸಹೋದ್ಯೋಗಿಯ ಸಮರ್ಥನೆಗೆ ಗಟ್ಟಿಯಾಗಿ ನಿಂತರು.
ಶಾ ಹೇಳಿಕೆ ವಿಚಾರವಾಗಿ ಎರಡೂ ಸದನಗಳಲ್ಲಿ ಪರಸ್ಪರ ಆರೋಪ–ಪ್ರತ್ಯಾರೋಪ ಜೋರಾಗಿದ್ದರಿಂದ ಬುಧವಾರ ಕಲಾಪ ನಡೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.