ADVERTISEMENT

ವಿಮಾನ ಯಾನಕ್ಕೂ ತಟ್ಟಿದ ಮುಷ್ಕರದ ಬಿಸಿ-ಕೇರಳಕ್ಕೆ ದುಪ್ಪಟ್ಟು ಟಿಕೆಟ್ ದರ

ಕೇರಳ ಖಾಸಗಿ ಬಸ್ಸುಗಳ ಮುಷ್ಕರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 10:55 IST
Last Updated 29 ಜೂನ್ 2019, 10:55 IST
   

ಕೇರಳ: ಸಾರಿಗೆ ಇಲಾಖೆಯ ರಾತ್ರಿ ಕಾರ್ಯಾಚರಣೆಯನ್ನು ವಿರೋಧಿಸಿ ಕೇರಳ ಖಾಸಗಿ ಬಸ್ ಮಾಲೀಕರು ನಡೆಸುತ್ತಿರುವ ಮುಷ್ಕರದ ಬಿಸಿ ಬೆಂಗಳೂರಿನಲ್ಲಿರುವ ಕೇರಳಿಗರಿಗೆ ತಟ್ಟಿದೆ. ಪ್ರಯಾಣಿಕರು ಈಗ ಬಸ್ಸುಗಳ ಬದಲು ವಿಮಾನ ನಿಲ್ದಾಣದತ್ತ ಧಾವಿಸುತ್ತಿರುವುದರಿಂದ ವಿಮಾನ ಪ್ರಯಾಣದರವೂ ಏರಿಕೆಯಾಗಿದ್ದು, ಪ್ರಯಾಣಿಕರು ತೀವ್ರ ಪರದಾಡುತ್ತಿದ್ದಾರೆ.

ಬೆಂಗಳೂರು-ಕೇರಳ ನಡುವೆ ಸಂಚರಿಸುವ ಖಾಸಗಿ ಬಸ್ಸುಗಳ ಮೇಲೆ ಕಳೆದ ವಾರ ಕೇರಳ ಸಾರಿಗೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸುತ್ತಿದ್ದರು.ಇದನ್ನು ವಿರೋಧಿಸಿ ಕೇರಳ ಖಾಸಗಿ ಬಸ್ ಮಾಲೀಕರ ಸಂಘ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿ ಇದನ್ನು ನಿಲ್ಲಿಸುವಂತೆ ಆಗ್ರಹಿಸಿತ್ತು. ಆದರೆ, ಕೇರಳ ಸರ್ಕಾರ ಸಾರ್ವಜನಿಕರ ಪರವಾಗಿ ನಿಂತಿತ್ತು. ಇದರಿಂದಾಗಿ ತಮ್ಮ ಬೇಡಿಕೆ ಈಡೇರಿಸುವರೆಗೂ ಖಾಸಗಿ ಬಸ್ ಮಾಲೀಕರ ಸಂಘಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದೆ. ಇದರಿಂದಾಗಿ ಕೇರಳದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರನಿಂದ ಕೇರಳಕ್ಕೆ ಹೊರಡಬೇಕಾಗಿದ್ದ ಖಾಸಗಿ ಬಸ್ಸುಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ಕೇರಳ ಸರ್ಕಾರಿ ಬಸ್ಸುಗಳನ್ನು ಹೊರತುಪಡಿಸಿ ಖಾಸಗಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿವೆ. ಪ್ರತಿದಿನ 2 ಸಾವಿರ ಪ್ರಯಾಣಿಕರು ಕರ್ನಾಟಕದಿಂದ ಕೇರಳಕ್ಕೆ ಕೇರಳದಿಂದ ಕರ್ನಾಟಕಕ್ಕೆ ಸಂಚರಿಸುತ್ತಾರೆ.ಇಷ್ಟು ಪ್ರಯಾಣಿಕರಿಗೆ ಈಗಿರುವ ಸರ್ಕಾರಿ ಬಸ್ಸುಗಳು ಹಾಗೂ ರೈಲುಗಳು ಸಾಕಾಗುತ್ತಿಲ್ಲ. ಇದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಏರಿದ ವಿಮಾನ ಟಿಕೆಟ್ ದರ: ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದವು. ಈಗ ಈ ವಿಮಾನಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ದರ ಏರಿಕೆಯನ್ನು ನೇರವಾಗಿ ವಿಮಾನ ಸಂಸ್ಥೆಗಳು ಹೇಳುತ್ತಿಲ್ಲ. ಆದರೆ, ಟಿಕೆಟ್ ಪಡೆಯುವಾಗ ₹1500 ಇದ್ದ ದರಕ್ಕಿಂದ ₹ 3000 ಹೆಚ್ಚಿನ ದರವನ್ನು ವಿಧಿಸುತ್ತಿವೆ. ಬೆಂಗಳೂರಿನಿಂದ ತಿರುವನಂತಪುರಕ್ಕೆ ₹ 2500ಇದ್ದರೆ, ಮುಷ್ಕರ ಆರಂಭವಾದ ದಿನದಿಂದ₹ 4000 ನಿಗದಿಪಡಿಸಿವೆ.

ADVERTISEMENT

ಕರ್ನಾಟಕದಿಂದ ಹೆಚ್ಚಿನ ಬಸ್ ಸಂಚಾರ: ಕೇರಳದಲ್ಲಿ ಖಾಸಗಿ ಬಸ್ಸುಗಳ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ 36 ಬಸ್ಸುಗಳು ಸಂಚರಿಸಲು ವ್ಯವಸ್ಥೆ ಮಾಡಿದೆ.

ಬೆಂಗಳೂರನಿಂದ ಕೇರಳದ ಎರ್ನಾಕುಲಂಗೆ 12, ಕೊಟ್ಟಾಯಂಗೆ 5, ತ್ರಿಚೂರ್ 5, ಕಣ್ಣಾನೂರ್ 6, ಕೋಜಿಕೋಡ್ 5, ಪಾಲ್ಗಾಟ್ 3 ಬಸ್ಸುಗಳು ಸಂಚರಿಸಲಿವೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.

ಏಪ್ರಿಲ್ 21ರ ಘಟನೆ ಕಾರಣ: ಕೇರಳದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸು ಕೆಟ್ಟು ನಿಂತಿತ್ತು. ಆಗ ಪ್ರಯಾಣಿಕರನ್ನು ರಾತ್ರಿ ವೇಳೆಯಲ್ಲಿಯೇ ಕೆಳಗೆ ಇಳಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಯುವಕನನ್ನು ಚಾಲಕ ಹಾಗೂ ಬಸ್ಸಿನ ಸಿಬ್ಬಂದಿ ಥಳಿಸಿದ್ದರು. ಅಲ್ಲದೆ, ಅದೇ ರಾತ್ರಿ ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮತ್ತಷ್ಟು ಹಲ್ಲೆ ನಡಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕೇರಳ ಸರ್ಕಾರಕ್ಕೂ ತಲುಪಿತ್ತು. ಯುವಕನಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದು ಕೇರಳ ಸರ್ಕಾರ ಅಲ್ಲಿನ ಸಾರಿಗೆ ಸಂಸ್ಥೆಗೆ ಆದೇಶ ನೀಡಿ ರಾತ್ರಿ ವೇಳೆ ಸಂಚರಿಸುವ ಬಸ್ಸುಗಳನ್ನು ತಪಾಸಣೆ ಮಾಡುವಂತೆ ನಿರ್ದೇಶನ ನೀಡಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲೀಕರು, ಯಾವುದೋ ಒಂದು ಬಸ್ಸಿನ ಸಿಬ್ಬಂದಿ ಮಾಡಿದ ತಪ್ಪಿಗೆ ಎಲ್ಲರನ್ನೂ ಹೊಣೆಯನ್ನಾಗಿಸುವುದು ತಪ್ಪು, ಅಲ್ಲದೆ ಎಲ್ಲಾ ಬಸ್ಸುಗಳನ್ನು ರಾತ್ರಿ ತಪಾಸಣೆ ನಡೆಸುವುದು, ಅಧಿಕ ದಂಡ ವಿಧಿಸುವುದು ಸರಿಯಾದುದಲ್ಲ, ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಕೇರಳ ಸರ್ಕಾರ ಹಾಗೂ ಖಾಸಗಿ ಬಸ್ಸುಗಳ ಮಾಲೀಕರ ನಡುವೆ ಸೋಮವಾರ ಮಾತುಕತೆ ಏರ್ಪಡಿಸಲಾಗಿತ್ತು. ಮಾತುಕತೆ ಮುರಿದು ಬಿದ್ದ ಕಾರಣ ಮುಷ್ಕರ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.