ADVERTISEMENT

ಡೆಲ್ಟಾ ರೂಪಾಂತರದಿಂದ 19 ವರ್ಷದೊಳಗಿನವರಲ್ಲಿ ಸೋಂಕು ಹೆಚ್ಚಳ: ಅಧ್ಯಯನ ವರದಿ

ಪಿಟಿಐ
Published 8 ಅಕ್ಟೋಬರ್ 2021, 7:39 IST
Last Updated 8 ಅಕ್ಟೋಬರ್ 2021, 7:39 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ಕೋವಿಡ್ -19 ಪ್ರಕರಣಗಳ ಕುರಿತಂತೆ ಭಾರತದಲ್ಲಿ ನಡೆಸಿದ ಅಧ್ಯಯನದಲ್ಲಿ 19 ವರ್ಷದೊಳಗಿನ ಕಿರಿಯ ವಯೋಮಾನದವರು ಮತ್ತು ಮಹಿಳೆಯರಲ್ಲಿ ಡೆಲ್ಟಾ ರೂಪಾಂತರದಿಂದಾಗಿ ಲಸಿಕೆ ಪಡೆದ ನಂತರವೂ ಸೋಂಕು, ಮರಣ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.

ಈ ವಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬಿಡುಗಡೆ ಮಾಡಿದ ಕೋವಿಡ್ -19 ವಾರದ ಸಾಂಕ್ರಾಮಿಕ ರೋಗಶಾಸ್ತ್ರ ಮಾಹಿತಿಯಲ್ಲಿ, ಇನ್ನೂ ಉನ್ನತ ಪರಿಶೀಲನೆಗೆ ಒಳಪಡದ ಅಂತರ್‌–ವಿಭಾಗೀಯ ಅಧ್ಯಯನದಲ್ಲಿ ಇದು ಪತ್ತೆಯಾಗಿದೆ. ಈ ಅಧ್ಯಯನವು ಅನಾರೋಗ್ಯದ ತೀವ್ರತೆ ಮತ್ತು ಮರಣ ಪ್ರಮಾಣ ಸೇರಿದಂತೆ ಜನಸಂಖ್ಯಾ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸಿದೆ.

ಭಾರತದಲ್ಲಿ ಕಳವಳಕಾರಿಯಲ್ಲದ (ಬಿ .1) ಕೊರೊನಾ ತಳಿ ಮತ್ತು ಡೆಲ್ಟಾ (ಬಿ .1.617.2) ಸೋಂಕಿತರ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ADVERTISEMENT

‘9,500 ಕೋವಿಡ್ -19 ರೋಗಿಗಳಿಂದ ವೈರಲ್ ಜೀನೋಮಿಕ್ ಸೀಕ್ವೆನ್ಸ್ ಬಳಸಿ, ಅಧ್ಯಯನ ನಡೆಸಲಾಗಿದೆ. ಇದರಲ್ಲಿ, ಕಿರಿಯ ವಯಸ್ಸಿನ (0-19 ವರ್ಷದವರು) ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದು, ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕಿತರ ಪ್ರಕರಣಗಳು ಕಂಡುಬಂದಿದೆ. ಸೋಂಕು ಮತ್ತು ರೋಗಲಕ್ಷಣದ ಅನಾರೋಗ್ಯ, ಹೆಚ್ಚಿನ ಮರಣ ಸಂಖ್ಯೆ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಯನದಲ್ಲಿ ಕಳವಳಕಾರಿಯಲ್ಲದ (B.1)ರೂಪಾಂತರಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರದಿಂದ ಲಸಿಕೆ ಪಡೆದ ನಂತರವೂ ಅಪಾಯ ಹೆಚ್ಚಿದೆ’ಎಂದು ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.

ಜಾಗತಿಕವಾಗಿ ಆಗಸ್ಟ್‌ನಿಂದ ಕೋವಿಡ್ -19 ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿದೆ.

ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3, 2021ರ ನಡುವೆ 31 ಲಕ್ಷ ಹೊಸ ಪ್ರಕರಣಗಳು ಮತ್ತು 54,000 ಸಾವುಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.