ADVERTISEMENT

ಮುಸ್ಲಿಮರ ಮೂಲೆಗುಂಪು ಮಾಡುವ ಷಡ್ಯಂತ್ರ: ಹಿಜಾಬ್ ಪರ ವಕೀಲರ ವಾದ

ದುಷ್ಯಂತ್‌ ದವೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:53 IST
Last Updated 20 ಸೆಪ್ಟೆಂಬರ್ 2022, 4:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕಳೆದ ಕೆಲವು ವರ್ಷಗಳಲ್ಲಿ ಇಸ್ಲಾಮಿಕ್‌ ಜಗತ್ತು ಆತ್ಮಹತ್ಯಾ ಬಾಂಬ್‌ ದಾಳಿಗಳ ಹಲವು ಘಟನೆಗಳಿಂದ ತತ್ತರಿಸಿದೆ. ಆದರೆ,5 ಸಾವಿರ ವರ್ಷಗಳ ಸಮನ್ವಯಉದಾರವಾದದ ಇತಿಹಾಸ ಹೊಂದಿರುವ ನಮ್ಮ ದೇಶದಲ್ಲಿ ಪುಲ್ವಾಮಾದಲ್ಲಿ ಮಾತ್ರ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದೆ. ಇದು ಅಲ್ಪಸಂಖ್ಯಾತರು ದೇಶದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ’ ಎಂದು ಹಿಜಾಬ್‌ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಸೋಮವಾರ ಮುಂದುವರಿಸಿತು.

ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠದ ಎದುರು ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ, ‘ತರಗತಿಯಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವ ಮೂಲಕ ಸಂವಿಧಾನದ ಅಡಿಯಲ್ಲಿ ಆತ್ಮಸಾಕ್ಷಿಯ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡಬೇಕು. ಈ ಮೂಲಕ ಸಮನ್ವಯ ಉದಾರವಾದದ ಸಂಸ್ಕೃತಿ ಸಂರಕ್ಷಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಹಿಜಾಬ್‌ ಧರಿಸಿರುವ ಮುಸ್ಲಿಂ ಯುವತಿಯರು ಯಾರ ಭಾವನೆಗಳನ್ನು ನೋಯಿಸುವುದಿಲ್ಲ ಹಾಗೂ ಹಿಜಾಬ್‌ ಅವರ ಗುರುತು’ ಎಂದು ಅವರು ಪ್ರತಿಪಾದಿಸಿದರು.

ದೇಶವು ಉದಾರವಾದದ ಸಂಪ್ರದಾಯದ ಮೇಲೆ ನಿರ್ಮಾಣವಾಗಿದೆ ಹಾಗೂ ವಿವಿಧತೆಯಲ್ಲಿ ಏಕತೆ ಇದೆ ಎಂದು ಅವರು ತಿಳಿಸಿದರು.

ಲವ್‌ ಜಿಹಾದ್‌ ವಿವಾದ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ನಿರಾಕರಿಸುವುದು ಅಲ್ಪಸಂಖ್ಯಾತ ಸಮುದಾಯವನ್ನು ಮೂಲೆ ಗುಂಪು ಮಾಡುವ ಷಡ್ಯಂತ್ರವನ್ನು ಸೂಚಿಸುತ್ತದೆ ಎಂದು ಅವರು ವಾದ ಮಂಡಿಸಿದರು.

‘ಒಬ್ಬ ಹಿಂದೂ ಹುಡುಗಿ ಮುಸ್ಲಿಂ ಹುಡುಗಿಯನ್ನು ಹಿಜಾಬ್‌ ಧರಿಸುವುದು ಏಕೆಂದು ಪ್ರಶ್ನಿಸುವುದು ಹಾಗೂ ಮುಸ್ಲಿಂ ಹುಡುಗಿ ಧರ್ಮದ ಬಗ್ಗೆ ವಿವರಿಸುವುದು ಒಂದು ಸುಂದರ ಸಂಭಾಷಣೆ’ ಎಂದರು.

‘ಪಶ್ವಿಮದ ರಾಷ್ಟ್ರಗಳು ಈಗಾಗಲೇ ಹಿಜಾಬ್‌ಗೆ ಅನುಮತಿ ನೀಡಿವೆ. ಅಮೆರಿಕದ ಸೇನೆಯಲ್ಲಿ ಟರ್ಬನ್‌ (ಪಗಡಿ) ಧರಿಸಲು ಅವಕಾಶ ನೀಡಲಾಗಿದೆ. ಸಿಖ್‌ ಧರ್ಮದವರು ಪಗಡಿ ಧರಿಸುವ ಬಗ್ಗೆ ವಿವಾದ ಇಲ್ಲದಿರುವಾಗ ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದು ಆಕ್ಷೇಪ ಏಕೆ’ ಎಂದು ಅವರು ಪ್ರಶ್ನಿಸಿದರು. ‘ಜಗತ್ತಿನಾದ್ಯಂತ ಮುಸ್ಲಿಂ ಮಹಿಳೆಯರು ಶತಮಾನಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ’ ಎಂದೂ ಹೇಳಿದರು.

ಮುಸ್ಲಿಂ ಮಹಿಳೆಯರಿಗೆ ಹಿಜಾಬ್‌ ಮುಖ್ಯವಾಗಿದೆ. ಅದು ಅವರ ನಂಬಿಕೆ ಎಂದು ಅವರು ಹೇಳಿದರು. ಹಿಜಾಬ್‌ ಧರಿಸುವುದರಿಂದ ದೇಶದ ಸಮಗ್ರತೆ ಹಾಗೂ ಏಕತೆಗೆ ಹೇಗೆ ಧಕ್ಕೆ ಬರುತ್ತದೆ ಎಂದು ಅವರು ಪ್ರಶ್ನಿಸಿದರು. ಕರ್ನಾಟಕ ಹೈಕೋರ್ಟ್‌ ಹಾಗೆ ಹೇಳಿಲ್ಲ ಮತ್ತು ಹಾಗೆಂದು ಯಾರೂ ಹೇಳುತ್ತಿಲ್ಲ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.

ಬಳಿಕ ವಿಚಾರಣೆಯನ್ನು ಮಂಗಳ ವಾರಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.