ADVERTISEMENT

ಹಿಜಾಬ್‌: ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ

ಸಂಯಮದಿಂದಿರಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 22:08 IST
Last Updated 19 ಮಾರ್ಚ್ 2022, 22:08 IST
   

ನವದೆಹಲಿ: ಹಿಜಾಬ್ ಕುರಿತ ರಾಜ್ಯ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯು, ಸಂಯಮದಿಂದ ಇರುವಂತೆ ಮುಸ್ಲಿಂ ಸಮುದಾಯದ ಜನತೆಗೆ ಸಲಹೆ ನೀಡಿದೆ.

ಇಸ್ಲಾಮಿಕ್‌ ಪರಿಸರ ಹಾಗೂ ಗುಣಮಟ್ಟದ ಶಿಕ್ಷಣದ ಸೌಲಭ್ಯ ಹೊಂದಿರುವ ಹೆಣ್ಣು ಮಕ್ಕಳ ಅಧಿಕ ಸಂಖ್ಯೆಯ ಶಾಲೆಗಳನ್ನು ಆರಂಭಿಸಲು ಶಿಕ್ಷಣ ತಜ್ಞರು, ವಿದ್ವಾಂಸರು, ಬುದ್ಧಿಜೀವಿಗಳು, ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಕೋರಿರುವ ಮಂಡಳಿಯು, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಸಿ, -ವಿದ್ಯಾರ್ಥಿನಿಯರಿಗಾಗಿ 8ನೇ ತರಗತಿಯಿಂದ ಪ್ರತ್ಯೇಕ ತರಗತಿಗಳನ್ನು ಆರಂಭಿಸುವಂತೆ ಸಮುದಾಯದ ಜನತೆ ಒತ್ತಾಯಿಸಬೇಕು ಎಂದು ಸೂಚಿಸಿದೆ.

ಯಾವುದೇ ರಾಜ್ಯ ಸರ್ಕಾರ ಹಿಜಾಬ್‌ ನಿಷೇಧಿಸಿ ಆದೇಶ ಹೊರಡಿಸಿದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದೆ, ಶಾಂತ ರೀತಿಯಲ್ಲಿ ಪ್ರತಿಭಟಿಸುವಂತೆ ಮಂಡಳಿ ತಿಳಿಸಿದೆ.
‌‌
ಹೈಕೋರ್ಟ್‌ ತೀರ್ಪು ವ್ಯಕ್ತಿಗತ ಸ್ವಾತಂತ್ರ್ಯವನ್ನು ಗಣನೆಗೆ ತೆಗೆದುಕೊಳ್ಳದೆ, ಇಸ್ಲಾಂನಲ್ಲಿ ಯಾವ ಕ್ರಮವು ಕಡ್ಡಾಯ ಹಾಗೂ ಯಾವುದು ಅಲ್ಲ ಎಂಬುದನ್ನು ಮಾತ್ರ ಪರಿಗಣಿಸಿದೆ. ಕಾನೂನು ಹೋರಾಟ ನಡೆಸುವ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಾಗುವುದು ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಪ್ರಕಟಣೆ ಮೂಲಕ ಹೇಳಿದ್ದಾರೆ.

ADVERTISEMENT

ಹಿಜಾಬ್ ಕುರಿತು ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಚರ್ಚಿಸಲು ಆನ್‌ಲೈನ್‌ ಮೂಲಕ ಇತ್ತೀಚೆಗೆ ನಡೆಸಲಾದ ಸಭೆಯಲ್ಲಿ ಮಂಡಳಿಯ ಕಾನೂನು ಸಮಿತಿಯ ಕಾರ್ಯದರ್ಶಿಗಳು ಹಾಗೂ ಅಮೀರ್‌–ಎ–ಶರೀಯತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ಖಾನ್‌ ರಶಾದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.