ADVERTISEMENT

ಇಂಧನ ಬೆಲೆ ಏರಿಕೆಗೆ ಕಾರಣ ಬಿಚ್ಚಿಟ್ಟ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್

ಏಜೆನ್ಸೀಸ್
Published 19 ಜನವರಿ 2021, 5:07 IST
Last Updated 19 ಜನವರಿ 2021, 5:07 IST
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್   

ಭೋಪಾಲ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಉತ್ಪಾದನೆ ಕಡಿಮೆಯಾದ ಕಾರಣದಿಂದಾಗಿ ಇಂಧನ ಬೆಲೆ ಏರಿಕೆಯಾಗಿದೆ. ಕಡಿಮೆ ಉತ್ಪಾದನೆಯು ಬೇಡಿಕೆ ಮತ್ತು ಪೂರೈಕೆಯಲ್ಲಿ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಅವಶ್ಯಕತೆಯ ಶೇ 80ರಷ್ಟು ಕಚ್ಚಾ ತೈಲವನ್ನು ನಾವು ಆಮದು ಮಾಡಿಕೊಳ್ಳಬೇಕಿರುವುದೇ ನಮ್ಮ ಮುಂದಿರುವ ಮುಖ್ಯ ಸವಾಲು. ಕೊರೊನಾ ವೈರಸ್ ಕಾರಣದಿಂದಾಗಿ ಅನೇಕ ತೈಲ ಉತ್ಪಾದನಾ ದೇಶಗಳು ಉತ್ಪಾದನೆಯನ್ನು ನಿಲ್ಲಿಸಿವೆ ಹಾಗೂ ಕಡಿತಗೊಳಿಸಿವೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದಾಗಿ ಇಂಧನ ಬೆಲೆಯ ಮೇಲೆ ಹೆಚ್ಚಿನ ಒತ್ತಡಉಂಟಾಗಿದೆ.

ಆದರೆ ಇಂಧನ ಬಳಕೆಯು ಹೆಚ್ಚುತ್ತಿದೆ. ಇಂಧನ ಬಳಕೆಗೆ ಸಂಬಂಧಿಸಿದಂತೆ ಇಡೀ ವಿಶ್ವದಲ್ಲಿಯೇ ಭಾರತ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಲು ಸರ್ಕಾರವು ಎಲೆಕ್ಟ್ರಿಕ್ ವಾಹನಗಳು (ಇವಿ), ಸೌರಶಕ್ತಿ, ಎಥೆನಾಲ್ ಉತ್ಪಾದನೆ ಇತ್ಯಾದಿಗಳತ್ತ ಗಮನ ಹರಿಸುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ADVERTISEMENT

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಎರಡು ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸಚಿವರು ಸೋಮವಾರ ಚಾಲನೆ ನೀಡಿದ್ದರು.

ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸುವ ಮತ್ತು ಆತ್ಮನಿರ್ಭರ ಭಾರತವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಇಲ್ಲಿನ ಜನರ ಕಲ್ಯಾಣಕ್ಕಾಗಿ ಇಂಧನ ಮಹಾರತ್ನ ಒಎನ್‌ಜಿಸಿ ಬೆಂಬಲಿಸುವ ಎರಡು ಯೋಜನೆಗಳಿಗೆ ಪ್ರಧಾನ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.