
13 ಸಾವಿರ ಅಡಿ ಎತ್ತರದಲ್ಲಿ ಕಸದ ರಾಶಿ
ಶಿಮ್ಲಾ: ಎತ್ತರದ ಶಿಖರ, ಹಿಮ ಮುಚ್ಚಿದ ಗುಡ್ಡ ಎಲ್ಲವೂ ನೋಡಲು ಚಂದ. ಆದರೆ ಇಂತಹ ಸುಂದರ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆದು ಮಲೀನಗೊಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶದ ಮಣಿಮಹೇಶ್ ಯಾತ್ರೆ ನಡೆಯುವ 13 ಸಾವಿರ ಅಡಿ ಎತ್ತರದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತ್ಯಾಜ್ಯಗಳ ರಾಶಿಯೇ ಸಂಗ್ರಹವಾಗಿದೆ.
ಈ ಕುರಿತಾದ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದು, 'ಪರ್ವತಗಳು ನಿಜವಾಗಿಯೂ ನಮ್ಮನ್ನು ಕರೆಯುತ್ತವೆಯೇ' ಎಂದು ಕೇಳಿದ್ದಾರೆ. ಸದ್ಯ ಈ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಣಿಮಹೇಶ್ ಯಾತ್ರೆಯು ಉತ್ತರ ಭಾರತದಲ್ಲಿ ಮಣಿಮಹೇಶ್ ಸರೋವರ ಮತ್ತು ಕೈಲಾಶ ಶಿಖರಕ್ಕೆ ಕರೆದೊಯ್ಯುವ ಪವಿತ್ರ ಹಿಂದೂ ತೀರ್ಥಯಾತ್ರೆಯಾಗಿದೆ.
ವಿಡಿಯೊ ಹರಿದಾಡುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಥಳೀಯ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಇನ್ನೊಂದೆಡೆ ಪ್ರವಾಸಿಗರ ಪ್ರಜ್ಞೆಯ ಕೊರತೆಯಿಂದಾಗಿ ಸ್ವರ್ಗವನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
'ಈ ರೀತಿ ಪರ್ವತ ಪ್ರದೇಶಗಳಲ್ಲಿ ಕಸ ಎಸೆದು ಸುಂದರ ಪ್ರದೇಶವನ್ನು ನಾಶಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ' ಎಂದು ಇನ್ನೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.