ADVERTISEMENT

ಹಿಮಾಚಲ: ₹11,000 ಕೋಟಿ ವೆಚ್ಚದ ಜಲ ವಿದ್ಯುತ್‌ ಯೋಜನೆಗಳಿಗೆ ಪ್ರಧಾನಿ ಇಂದು ಚಾಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2021, 3:53 IST
Last Updated 27 ಡಿಸೆಂಬರ್ 2021, 3:53 IST
ಸಾಂರ್ಭಿಕ ಚಿತ್ರ
ಸಾಂರ್ಭಿಕ ಚಿತ್ರ   

ನವದೆಹಲಿ/ ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿಮಾಚಲ ಪ್ರದೇಶದಲ್ಲಿ ಸುಮಾರು ₹11,000 ಕೋಟಿ ವೆಚ್ಚದ ಜಲ ವಿದ್ಯುತ್‌ ಯೋಜನೆಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವು ನಾಲ್ಕನೇ ವರ್ಷಾಚರಣೆಯನ್ನು ಆಚರಿಸುತ್ತಿದೆ. ಇದೇ ಸಮಯದಲ್ಲಿ ಸುಮಾರು 30 ವರ್ಷಗಳಿಂದ ನೆನೆಗುದಿದೆ ಬಿದ್ದಿರುವ 'ರೇಣುಕಾಜಿ' ಡ್ಯಾಂ ಯೋಜನೆಗೂ ಚಾಲನೆ ಸಿಗಲಿದೆ.

ಪ್ರಧಾನ ಮಂತ್ರಿ ಕಾರ್ಯಾಲಯದ (ಪಿಎಂಒ) ಪ್ರಕಾರ, ರೇಣುಕಾಜಿ ಡ್ಯಾಂನ 40 ಮೆಗಾವ್ಯಾಟ್‌ ವಿದ್ಯುತ್‌ ಯೋಜನೆಯು ಆರು ರಾಜ್ಯಗಳ ಸಹಕಾರದಿಂದ ಸಾಧ್ಯವಾಗುತ್ತಿದೆ. ಕೇಂದ್ರ ಸರ್ಕಾರದ ಕೋರಿಕೆಯೊಂದಿಗೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ ಹಾಗೂ ದೆಹಲಿಯ ಸಂಯೋಜಿತ ಪ್ರಯತ್ನದಿಂದ ಯೋಜನೆ ಸಾಕಾರಿಯಾಗಲಿದೆ. ₹7,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡ್ಯಾಂ ಮೂಲಕ ವಿದ್ಯುತ್‌ ಉತ್ಪಾದನೆ ಮತ್ತು ದೇಶದ ರಾಜಧಾನಿ ದೆಹಲಿಗೆ ನೀರು ಪೂರೈಕೆ ಸಾಧ್ಯವಾಗಲಿದೆ.

ADVERTISEMENT

ಹಿಮಾಚಲದ ಸಿರಮೌರಿ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ರೇಣುಕಾಜಿ ಡ್ಯಾಂನಲ್ಲಿ ಯಮುನಾದ ಉಪನದಿ 'ಗಿರಿ' ನದಿಯ ನೀರು ಸಂಗ್ರಹವಾಗಲಿದೆ. ಇಲ್ಲಿಂದ ದೆಹಲಿಗೆ ವಾರ್ಷಿಕ ಸುಮಾರು 50 ಕೋಟಿ ಕ್ಯೂಬಿಕ್ ಮೀಟರ್‌ಗಳಷ್ಟು ನೀರು ಹರಿಯಲಿದೆ.

ಲೂಹರಿ ಮೊದಲ ಹಂತದ ಜಲ ವಿದ್ಯುತ್‌ ಯೋಜನೆಗೆ ಪ್ರಧಾನಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ₹1,800 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡ್ಯಾಂನಿಂದ ಪ್ರತಿ ವರ್ಷ ಸುಮಾರು 75 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದನೆಯಾಗುವ ನಿರೀಕ್ಷೆ ಇದೆ.

ಹಮಿರ್‌ಪುರ್‌ ಜಿಲ್ಲೆಯಲ್ಲಿ ಧೌಲಾಸಿಧ್‌ ಜಲ ವಿದ್ಯುತ್‌ ಯೋಜನೆಗೂ ಶಂಕು ಸ್ಥಾಪನೆ ನೆರವೇರಲಿದೆ. ₹680 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯ ಮೂಲಕ ಪ್ರತಿ ವರ್ಷ 30 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸುವ ಅವಕಾಶ ನಿರ್ಮಾಣವಾಗಲಿದೆ.

₹2,080 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 111 ವೆಗಾ ವ್ಯಾಟ್‌ ಸಾಮರ್ಥ್ಯದ 'ಸಾವಡಾ–ಕುಡ್ಡು' ಜಲ ವಿದ್ಯುತ್‌ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇಲ್ಲಿ ಪ್ರತಿ ವರ್ಷ 38 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದನೆಯಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹120 ಕೋಟಿ ಆದಾಯ ತಂದುಕೊಡಲಿದೆ.

ಹಿಮಾಚಲ ಪ್ರದೇಶದ ಜಾಗತಿಕ ಹೂಡಿಕೆದಾರರ ಸಭೆಯ ಸಮಾರಂಭದಲ್ಲಿ ಪ್ರಧಾನಿ ಭಾಗಿಯಾಗಲಿದ್ದು, ₹28,000 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ಸಿಗುವುದರಿಂದ ಈ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನೆ ಸಿಗುವ ನಿರೀಕ್ಷೆ ಇರುವುದಾಗಿ ಪಿಎಂಒ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.