ADVERTISEMENT

ಹಿಮಾಚಲ ಪ್ರದೇಶ | ಭಾರಿ ಮಳೆ, ಹಠಾತ್ ಪ್ರವಾಹ: ಐವರು ಸಾವು

ಪಿಟಿಐ
Published 3 ಸೆಪ್ಟೆಂಬರ್ 2025, 2:35 IST
Last Updated 3 ಸೆಪ್ಟೆಂಬರ್ 2025, 2:35 IST
   

ಶಿಮ್ಲಾ (ಹಿಮಾಚಲ ಪ್ರದೇಶ): ರಾಜ್ಯಾದಾದ್ಯಂತ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,337 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರಾ, ಮಂಡಿ, ಸಿರಮೌರ್ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಬುಧವಾರ (ಇಂದು) ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸ್ಥಳೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್ ಘೋಷಿಸಿದೆ. ಉನಾ ಮತ್ತು ಬಿಲಾಸ್ಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದೆ.

ಸೋಲನ್ ಜಿಲ್ಲೆಯ ಸ್ಯಾಮ್ಲೋ ಗ್ರಾಮದಲ್ಲಿ, ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆ ಕುಸಿದು ಬಿದ್ದು, ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಹೇಮಲತಾ ಎಂದು ಗುರುತಿಸಲಾಗಿದೆ.

ADVERTISEMENT

‌ಮತ್ತೊಂದು ಘಟನೆಯಲ್ಲಿ, ಕುಲ್ಲುವಿನ ಧಲ್ಪುರದಲ್ಲಿ ಮನೆಯ ಅವಶೇಷಗಳಡಿಯಿಂದ ಸಿಲುಕಿದ್ದ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಲಾಗಿತ್ತು. ಅಸ್ವಸ್ಥಗೊಂಡ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.

ಮಂಡಿ ಜಿಲ್ಲೆಯ ಸುಂದರನಗರದ ಜಂಗಮ್ ಬಾಗ್ ಬಿಬಿಎಂಬಿ ಕಾಲೋನಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಹಿಳೆಯರು, ಒಂದು ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಭಾರತಿ (28) ಮತ್ತು ಅವರ ಎರಡೂವರೆ ವರ್ಷದ ಮಗು ಕೀರ್ತನ್ ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ

ಇನ್ನೂ ಎರಡು-ಮೂರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಂಡಿ ಜಿಲ್ಲಾಧಿಕಾರಿ ಅಪೂರ್ವ್ ದೇವಗನ್ ತಿಳಿಸಿದ್ದಾರೆ.

ಶಾಲೆಗಳಿಗೆ ಇಂದು ರಜೆ

ಭಾರಿ ಮಳೆ ಹಿನ್ನೆಲೆ ಶಿಮ್ಲಾ, ಕಾಂಗ್ರಾ ಮತ್ತು ಸಿರಮೌರ್ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

1,337 ರಸ್ತೆಗಳಲ್ಲಿ ಸಂಚಾರ ಸ್ಥಗಿತ

4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,337 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅವುಗಳಲ್ಲಿ ಮಂಡಿಯಲ್ಲಿ–282 , ಶಿಮ್ಲಾದಲ್ಲಿ–255 ,ಚಂಬಾದಲ್ಲಿ 239, ಕುಲ್ಲು 205 ಮತ್ತು ಸಿರಮೌರ್ ಜಿಲ್ಲೆಯ 140 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 3 (ಮಂಡಿ-ಧರಂಪುರ್ ರಸ್ತೆ ), ರಾಷ್ಟ್ರೀಯ ಹೆದ್ದಾರಿ 305 (ಆಸ್ಟ್-ಸೈಂಜ್), ರಾಷ್ಟ್ರೀಯ ಹೆದ್ದಾರಿ 5 (ಹಳೆಯ ಹಿಂದೂಸ್ತಾನ್-ಟಿಬೆಟ್ ರಸ್ತೆ ) ಮತ್ತು ರಾಷ್ಟ್ರೀಯ ಹೆದ್ದಾರಿ 707 (ಹಟ್ಕೋಟಿ–ಪೋಂಟಾ) ಗಳಲ್ಲಿಯೂ ಸಂಚಾರ ಸ್ಥಗಿತಗೊಂಡಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.

ಜೂನ್ 20 ರಂದು ಮಾನ್ಸೂನ್ ಆರಂಭವಾಗಿದ್ದು, ಅಲ್ಲಿಂದ ಈವರೆಗೆ ರಾಜ್ಯದಲ್ಲಿ (ಹಿಮಾಚಲ ಪ್ರದೇಶ) 95 ಹಠಾತ್‌ ಪ್ರವಾಹ, 45 ಮೇಘಸ್ಫೋಟ ಮತ್ತು 121 ಭೂಕುಸಿತ ಸಂಭವಿಸಿವೆ. ಮಳೆ ಸಂಬಂಧಿತ ಅವಘಡ ಹಾಗೂ ರಸ್ತೆ ಅಪಘಾತಗಳಲ್ಲಿ ಕನಿಷ್ಠ 340 ಜನ ಮೃತಪಟ್ಟಿದ್ದಾರೆ. 41 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎಸ್‌ಇಒಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.