ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
– ಪಿಟಿಐ ಚಿತ್ರ
ಗುವಾಹಟಿ: ಮುಸ್ಲಿಮರಿಂದ ರಾಜ್ಯದ ಜನಸಂಖ್ಯೆ ಬದಲಾವಣೆ ಮಾತ್ರವಲ್ಲದೆ, ಅವರು ಶ್ರೀಮಂತರಾಗುತ್ತಿರುವುದರಿಂದ ‘ಆರ್ಥಿಕ ಪಲ್ಲಟ’ಕ್ಕೂ ಕಾರಣವಾಗುತ್ತಿದೆ. ಮುಸ್ಲಿಮರು ಶ್ರೀಮಂತರಾಗುತ್ತಿದ್ದಾರೆ ಎಂದರೆ ಅಸ್ಸಾಮಿಗಳು ಶರಣಾಗುತ್ತಿದ್ದಾರೆ ಎಂದರ್ಥ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಭಾನುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದೆ, ಮುಸ್ಲಿಮರದ್ದು ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
‘2001 ರಿಂದ 2011 ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿದೆ ಎನ್ನುವುದಕ್ಕೆ ನನ್ನಲ್ಲಿ ದತ್ತಾಂಶ ಇದೆ. ಅಸ್ಸಾಂನ ಪ್ರತಿಯೊಂದು ಕಡೆಯಲ್ಲೂ ಹಿಂದೂ ಜನಸಂಖ್ಯೆ ಕುಸಿತಗೊಂಡು, ಮುಸ್ಲಿಮರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಜನಸಂಖ್ಯೆ ಬದಲಾವಣೆ ವೇಗವಾಗಿ ಆಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇದು ಅಸ್ಸಾಂ ಜನರ ಶರಣಾಗತಿಯ ಅಧ್ಯಾಯ ಅರಂಭವಾಗಿದೆ ಎಂದರ್ಥ’ ಎಂದು ಹೇಳಿದ್ದಾರೆ.
ಹಿಂದೂ–ಮುಸ್ಲಿಮರ ನಡುವೆ ಭೂಮಿ ಮಾರಾಟವನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದ್ದೆ. ಹಿಂದೂಗಳು ಮುಸ್ಲಿಮರಿಗೆ ಭೂಮಿ ಮಾರಾಟ ಮಾಡುವುದು ಹೆಚ್ಚಳವಾಗುತ್ತಿದೆ. ಆದರೆ ಮುಸ್ಲಿಮರು ಹಿಂದೂಗಳಿಗೆ ಭೂಮಿ ಮಾರಾಟ ಮಾಡುವ ಪ್ರಮಾಣ ಕಡಿಮೆ ಇದೆ’ ಎಂದು ಅವರು ಹೇಳಿದ್ದಾರೆ.
ಜನಸಂಖ್ಯೆ ಬದಲಾವಣೆ ಹೊರತಾಗಿ, ಸಂಪತ್ತು ಗಳಿಕೆಯಲ್ಲೂ ವ್ಯತ್ಯಾಸ ಉಂಟಾಗಿದೆ. ಜನಸಂಖ್ಯೆ ಮಾತ್ರ ಹೆಚ್ಚಳವಾಗಿದೆ ಎಂದು ನಾವು ಅಂದುಕೊಂಡಿದ್ದರೆ, ಈಗ ಸಂಪತ್ತು ಸೃಷ್ಠಿಯಲ್ಲೂ ಬದಲಾವಣೆಗಳು ಸಂಭವಿಸಿವೆ.
ಈ ಬಗ್ಗೆ ಇನ್ನೊಮ್ಮೆ ಪತ್ರಿಕಾಗೋಷ್ಟಿ ನಡೆಸಿ ವಿಸ್ತೃತ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
‘ಜಸಸಂಖ್ಯೆಯಲ್ಲಿ ಬದಲಾಗುತ್ತಿರುವುದನ್ನು ಕೆಲವೊಮ್ಮೆ ಒಪ್ಪಿಕೊಳ್ಳಬಹುದು, ಆದರೆ ಆರ್ಥಿಕ ಪಲ್ಲಟ ವಿನಾಶಕಾರಿ ಸಂಕೇತ. ಈ ಹಿಂದೆ ನಮಗೆ ಇದು ಗೊತ್ತಿರಲಿಲ್ಲ. ಈಗ ಭೂಮಿ ಮಾರಾಟಕ್ಕೆ ಸರ್ಕಾರದ ಅನುಮತಿ ಬೇಕಾಗಿದ್ದರಿಂದ ದತ್ತಾಂಶಗಳು ಸಿಗುತ್ತಿವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.