
ಗುವಾಹಟಿ: ‘2014ರಲ್ಲಿ ನಾನು ಕಾಂಗ್ರೆಸ್‌ನಲ್ಲಿದ್ದ ವೇಳೆ 58 ಶಾಸಕರು ನನ್ನನ್ನು ಬೆಂಬಲಿಸಿದ್ದರಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ದಿನಾಂಕ ನಿಗದಿಪಡಿಸಲು ಕಾಂಗ್ರೆಸ್‌ನ ಆಗಿನ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದರು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬಹಿರಂಗಪಡಿಸಿದ್ದಾರೆ.
‘ಆಗ ಅಮೆರಿಕದಲ್ಲಿದ್ದ ರಾಹುಲ್ ಗಾಂಧಿ ಅವರು ಪಕ್ಷದ ನಾಯಕರಿಗೆ ದೂರವಾಣಿ ಕರೆ ಮಾಡಿದ ಬಳಿಕ ಪರಿಸ್ಥಿತಿ ಬದಲಾಯಿತು’ ಎಂದು ಶರ್ಮಾ ನೆನಪಿಸಿದ್ದಾರೆ.
2011ರಲ್ಲಿ ಅಸ್ಸಾಂನ ಕಾಂಗ್ರೆಸ್ ಸರ್ಕಾರದಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಬಹುಪಾಲು ಶಾಸಕರು ಆಗ ಶರ್ಮಾ ಅವರನ್ನು ಬೆಂಬಲಿಸಿ, ಗೊಗೊಯಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದರು. ಈ ಬೆಳವಣಿಗೆ ಬಳಿಕ ಶರ್ಮಾ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿತ್ತು. ಕಾಂಗ್ರೆಸ್‌ನ ಆಗಿನ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿಸಿದ್ದರೂ ರಾಹುಲ್ ಗಾಂಧಿ ಒಪ್ಪಿರಲಿಲ್ಲ. ಹೀಗಾಗಿ, 2015ರಲ್ಲಿ ಬೆಂಬಲಿಗ ಶಾಸಕರ ಜೊತೆ ಕಾಂಗ್ರೆಸ್ ತೊರೆದಿದ್ದ ಶರ್ಮಾ, ಬಿಜೆಪಿ ಸೇರಿದ್ದರು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ಹಿಡಿದಿತ್ತು.
‘ಮೇಡಂ (ಸೋನಿಯಾ ಗಾಂಧಿ) ಅವರೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ದಿನಾಂಕ ನಿಗದಿಪಡಿಸುವಂತೆ ಸೂಚಿಸಿದ್ದರು. ಕಾಮಾಕ್ಯ ದೇವಾಲಯದ ಅಂಬುಬಾಚಿ ಮೇಳದ ನಂತರ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದೆ. ರಾಹುಲ್ ಗಾಂಧಿ ಅವರು ಕರೆ ಮಾಡಿದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಯಿತು’ ಎಂದು ಹೇಳಿದ್ದಾರೆ.
‘ಈ ಬೆಳವಣಿಗೆ ತೀವ್ರ ನೋವುಂಟು ಮಾಡಿತು. ಯಾರ ಜೀವನದಲ್ಲಿ ಏನು ಆಗಿದೆಯೋ ಒಳ್ಳೆಯದಕ್ಕೆ ಆಗಿದೆ, ನಾನು ಕಾಂಗ್ರೆಸ್‌ನಲ್ಲಿದ್ದರೆ, ಅದಕ್ಕಿಂತ ಹೆಚ್ಚಿನದೇ ಸಿಕ್ಕಿತು. ನಾನು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಅಸ್ಸಾಂ ಜನರ ಹಾಗೂ ಸನಾತನ ಧರ್ಮದ ಸೇವೆ ಮಾಡುವ ಅವಕಾಶ ದೊರಕಿದೆ. ಕಾಂಗ್ರೆಸ್‌ನಲ್ಲಿದ್ದರೆ, ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ’ ಎಂದು ತಿಳಿಸಿದ್ದಾರೆ.
‘ರಾಜಕಾರಣದಲ್ಲಿ ನಡೆದ ಬೆಳವಣಿಗೆಗಳ ಕುರಿತು ಪುಸ್ತಕ ಬರೆಯಲಿದ್ದು, ಈ ಕುರಿತು ವಿಸ್ತೃತ ವಿವರಣೆ ನೀಡಲಿದ್ದೇನೆ’ ಎಂದು ವಿವರಿಸಿದ್ದಾರೆ.
ಹಿಮಂತ ಬಿಸ್ವ ಶರ್ಮ 2021ರಿಂದ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.
ಮಧ್ಯಂತರ ಬಜೆಟ್ ಮಂಡನೆ ಗುವಾಹಟಿ
ಅಸ್ಸಾಂ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೇ ಹಣಕಾಸು ಸಚಿವ ಅಜಂತಾ ನಿಯೋಗ್ ಅವರು ಮಂಗಳವಾರ ಮಧ್ಯಂತರ ಬಜೆಟ್ ಮಂಡಿಸಿದರು. ನಾಗರಿಕರಿಗೆ ನೇರ ನಗದು ಒದಗಿಸುವ ಹಲವು ಯೋಜನೆಗಳನ್ನು ಮುಂದುವರಿಸಲಾಗಿದೆ. ಆರ್‌ಬಿಐ ದತ್ತಾಂಶಗಳ ಪ್ರಕಾರ ರಾಜ್ಯವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ ಎಂದು ಬಜೆಟ್ ಮಂಡನೆ ವೇಳೆ ಪ್ರಕಟಿಸಿದರು. ‘ನಿಜೂತ್–ಮೊಯಿನಾ’ ಯೋಜನೆ ಜಾರಿಯಿಂದ ಬಾಲಕಿಯರು ಶಾಲೆಯಿಂದ ಹೊರಗುಳಿಯುವ ಪ್ರಮಾಣವು ಶೇಕಡಾ 8.2ಕ್ಕೆ ಇಳಿಕೆಯಾಗಿದೆ. ‘ಮುಖ್ಯಮಂತ್ರಿ ನಿಜುತ್ ಮೊಯಿನಾ’ ಯೋಜನೆ ಅಡಿಯಲ್ಲಿ ರಾಜ್ಯದ 5.5 ಲಕ್ಷ ವಿದ್ಯಾರ್ಥಿನಿಯರಿಗೆ ಮಾಸಿಕ ₹1 ಸಾವಿರದಿಂದ ₹2500ರವರೆಗೆ ನೆರವು ನೀಡಲಾಗುತ್ತಿದ್ದು ಈ ಬಾರಿಯೂ ಮುಂದುವರಿಸಲಾಗಿದೆ. ಮುಖ್ಯಮಂತ್ರಿ ನಿಜುತ್ ಬಾಬು ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ 47428 ಬಾಲಕರಿಗೂ ಮಾಸಿಕ ₹1 ಸಾವಿರದಿಂದ ₹2 ಸಾವಿರ ನೆರವು ನೀಡಲಾಗುತ್ತದೆ’ ಎಂದು ಪ್ರಕಟಿಸಿದರು. ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ಇದೇ ಮಾರ್ಚ್– ಏಪ್ರಿಲ್ ತಿಂಗಳಲ್ಲಿ ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.