J&K ಪ್ರವಾಹ
ಕಥುವಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಮನೆ ಕಳೆದುಕೊಂಡು ಕುಟುಂಬವೊಂದಕ್ಕೆ ಆಸರೆ ನೀಡುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆಯಲಾಗಿದೆ.
ಕಥುವಾ ಜಿಲ್ಲೆಯ ಬಾನಿ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಜಾವೇದ್ ಅಹಮ್ಮದ್ ಎಂಬುವರು ಮನೆ ಕಳೆದುಕೊಂಡಿದ್ದರು. ಈ ವೇಳೆ ಅವರ ಕಟುಂಬಕ್ಕೆ ಸುಭಾಶ್ ಎಂಬುವವರು ಆಸರೆ ನೀಡಿ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ.
ಪ್ರವಾಹದಲ್ಲಿ ನಮ್ಮ ಮನೆ ಹಾಳಾಗಿದೆ. ಎಲ್ಲಿಯೂ ನಮಗೆ ಸಹಾಯ ಸಿಗಲಿಲ್ಲ, ಈ ವೇಳೆ ಸುಭಾಶ್ ನಮಗೆ ಆಶ್ರಯ ನೀಡಿದರು. ಈಗ ನಾವು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ. ಅವರು ನಮಗೆ ಮೊದಲ ಮಹಡಿಯಲ್ಲಿರುವ ಎರಡು ಕೊಠಡಿಗಳನ್ನು ನೀಡಿದ್ದಾರೆ. ಅವರು ಎರಡನೇ ಮಹಡಿಯಲ್ಲಿದ್ದಾರೆ. ನಾವು ನಮ್ಮದೇ ಮನೆಯಲ್ಲಿರುವಂತೆ ಭಾಸವಾಗುತ್ತಿದೆ ಎಂದು ಜಾವೇದ್ ಅಹಮ್ಮದ್ ಹೇಳಿದ್ದಾರೆ.
ಅವರು ನಮಗೆ ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳನ್ನು ನೀಡಿದ್ದಾರೆ ಎಂದು ಸುಬಾಶ್ ಅವರ ಮಾನವೀಯ ನೆರವನ್ನು ಜಾವೇದ್ ಮೆಚ್ಚಿಕೊಂಡಿದ್ದಾರೆ. ನಾನು ಮನೆ ಕಳೆದುಕೊಂಡಿರುವುದರಿಂದ ಸರ್ಕಾರ ಪರಿಹಾರ ನೀಡಬೇಕೆಂದು ಜಾವೇದ್ ಮನವಿ ಮಾಡಿದರು.
ಜಾವೇದ್ ಅಹಮ್ಮದ್ ಹಾಗೂ ಅವರ ತಂದೆ-ತಾಯಿ, ಇಬ್ಬರು ದೃಷ್ಟಿಹೀನ ಮಕ್ಕಳು ಸೇರಿ ಎಂಟು ಮಂದಿ ಸುಭಾಶ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಸ್ಥಳೀಯ ಶಾಸಕರಾದ ರಾಮೇಶ್ವರ್ ಸಿಂಗ್ ಈ ಕುಟುಂಬಗಳನ್ನು ಭೇಟಿ ಮಾಡಿ, ಇದು ಜಮ್ಮು-ಕಾಶ್ಮೀರದ ನಿಜವಾದ ಸೌಂದರ್ಯ, ಸಂಕಷ್ಟದ ಸಮಯದಲ್ಲಿ ಏಕತೆ, ಮಾನವೀಯತೆ ಎಲ್ಲಕ್ಕಿಂತ ಮುಖ್ಯ. ಇಂತಹ ಮಾನವೀಯ ಘಟನೆಗಳು ಸ್ಥಳೀಯ ಸಮುದಾಯಗಳ ಏಕತೆ, ಧೈರ್ಯ ಹಾಗೂ ಸಾಮರಸ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳು ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.