ADVERTISEMENT

ಅಜ್ಮೇರ್‌ ದರ್ಗಾ ಹಿಂದೆ ದೇಗುಲವಾಗಿತ್ತು, ಸಮೀಕ್ಷೆಯಾಗಲಿ: ಹಿಂದು ಸಂಘಟನೆ ಆಗ್ರಹ

ಪಿಟಿಐ
Published 27 ಮೇ 2022, 4:36 IST
Last Updated 27 ಮೇ 2022, 4:36 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಅಜ್ಮೇರ್: ರಾಜಸ್ಥಾನದ ಅಜ್ಮೇರ್‌ನಲ್ಲಿರುವ, ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಹಿಂದೆ ಹಿಂದು ದೇಗುಲವಾಗಿತ್ತು ಎಂದು ‘ಮಹಾರಾಣ ಪ್ರತಾಪ್ ಸೇನಾ’ ಪ್ರತಿಪಾದಿಸಿದ್ದು, ಭಾರತೀಯ ಪುರಾತತ್ವ ಇಲಾಖೆಯಿಂದ (ಎಎಸ್ಐ) ಸಮೀಕ್ಷೆ ನಡೆಯಲಿ ಎಂದು ಆಗ್ರಹಿಸಿದೆ.

ದರ್ಗಾದ ಕಿಟಕಿಗಳಲ್ಲಿ ಹಿಂದು ಚಿಹ್ನೆಗಳಿವೆ ಎಂದು ‘ಮಹಾರಾಣ ಪ್ರತಾಪ್ ಸೇನಾ’ದ ರಾಜವರ್ಧನ್ ಸಿಂಗ್ ಪರ್ಮಾರ್ ಹೇಳಿದ್ದಾರೆ.

ಆದರೆ, ಈ ಪ್ರತಿಪಾದನೆಯನ್ನು ದರ್ಗಾ ಆಡಳಿತ ಅಲ್ಲಗಳೆದಿದ್ದು, ಯಾವುದೇ ಕುರುಹು ಇಲ್ಲ ಎಂದು ಹೇಳಿದೆ.

ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪರ್ಮಾರ್, ‘ದರ್ಗಾವು ಪ್ರಾಚೀನ ಹಿಂದು ದೇಗುಲವಾಗಿತ್ತು. ದರ್ಗಾದ ಗೋಡೆಗಳಲ್ಲಿ ಮತ್ತು ಕಿಟಕಿಗಳಲ್ಲಿ ಸ್ವಸ್ತಿಕ ಚಿಹ್ನೆ ಇದೆ. ಭಾರತೀಯ ಪುರಾತತ್ವ ಇಲಾಖೆ ದರ್ಗಾದಲ್ಲಿ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸುತ್ತೇವೆ’ ಎಂದು ಹೇಳಿದ್ದಾರೆ.

ಈ ಕುರಿತು ‘ಅಂಜುಮಾನ್ ಸಯ್ಯದ್ ಜದ್‌ಗಾನ್’ ಅಧ್ಯಕ್ಷ ಮೊಯಿನ್ ಚಿಸ್ತಿ ಪ್ರತಿಕ್ರಿಯಿಸಿ, ‘ಹಿಂದು ದೇಗುಲವಾಗಿತ್ತೆಂಬ ಪ್ರತಿಪಾದನೆ ಆಧಾರರಹಿತ. ಪ್ರತಿ ವರ್ಷ ಹಿಂದುಗಳೂ ಸೇರಿದಂತೆ ಲಕ್ಷಾಂತರ ಮಂದಿ ದರ್ಗಾಕ್ಕೆ ಭೇಟಿ ನೀಡುತ್ತಾರೆ’ ಎಂದು ಹೇಳಿದ್ದಾರೆ.

‘ದರ್ಗಾದಲ್ಲಿ ಎಲ್ಲೂ ಸ್ವಸ್ತಿಕ ಚಿಹ್ನೆ ಇಲ್ಲ. ನೂರಾರು ವರ್ಷಗಳಿಂದ ದರ್ಗಾ ಇಲ್ಲಿದೆ. ಹೀಗಾಗಿ ಯಾವುದೇ ಪ್ರಶ್ನೆ ಉದ್ಭವಿಸದು. ಹಿಂದೆಂದೂ ಇಲ್ಲದಂಥ ವಾತಾವರಣ ಇಂದು ದೇಶದಲ್ಲಿ ಸೃಷ್ಟಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಹಕ್ಕು ಪ್ರತಿಪಾದಿಸುವುದು ಅಲ್ಲಿ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಂತೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.