ADVERTISEMENT

ರಾಹುಲ್ ಗಾಂಧಿಯ ಸುಳ್ಳುಗಳಿಂದ ವಿದೇಶದಲ್ಲಿ ದೇಶದ ಘನತೆಗೆ ಹಾನಿ: ಜೈಶಂಕರ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2025, 13:23 IST
Last Updated 3 ಫೆಬ್ರುವರಿ 2025, 13:23 IST
<div class="paragraphs"><p>ರಾಹುಲ್‌ ಗಾಂಧಿ ಹಾಗೂ ಎಸ್‌.ಜೈಶಂಕರ್‌</p></div>

ರಾಹುಲ್‌ ಗಾಂಧಿ ಹಾಗೂ ಎಸ್‌.ಜೈಶಂಕರ್‌

   

ಪಿಟಿಐ ಚಿತ್ರಗಳು

ನವದೆಹಲಿ: ತಾವು ಅಮೆರಿಕಕ್ಕೆ ಭೇಟಿ ನೀಡಿದ್ದರ ಬಗ್ಗೆ ಕಾಂಗ್ರೆಸ್‌ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಸುಳ್ಳು ಹೇಳಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೋಮವಾರ ಆರೋಪಿಸಿದ್ದಾರೆ.

ADVERTISEMENT

ಜೈಶಂಕರ್ ಅವರು 2024ರ ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈಶಂಕರ್, ತಾವು ಅಮೆರಿಕದ ರಾಜ್ಯ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಭೇಟಿ ಮಾಡಲು ಹೋಗಿದ್ದಾಗಿ ಹಾಗೂ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡುವ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಪ್ರಧಾನಿ ಅವರಿಗೆ ಆಹ್ವಾನ ನೀಡುವ ಬಗ್ಗೆ ಯಾವುದೇ ಹಂತದಲ್ಲಿ ಚರ್ಚಿಸಿಲ್ಲ. ನಮ್ಮ ಪ್ರಧಾನಿ, ಅಂತಹ (ಪ್ರಮಾಣವಚನ) ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವಾಸ್ತವದಲ್ಲಿ, ವಿಶೇಷ ರಾಜತಾಂತ್ರಿಕರು ಭಾರತವನ್ನು ಪ್ರತಿನಿಧಿಸುತ್ತಾರೆ. ರಾಹುಲ್ ಗಾಂಧಿ ಅವರ ಸುಳ್ಳು ರಾಜಕೀಯ ದುರುದ್ದೇಶದಿಂದ ಕೂಡಿರಬಹುದು. ಆದರೆ, ವಿದೇಶದಲ್ಲಿ ದೇಶದ ಘನತೆಗೆ ಅವರು ಹಾನಿ ಮಾಡಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ದಿನ ಲೋಕಸಭೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, 'ಅಮೆರಿಕ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಅವರಿಗೆ ಆಹ್ವಾನ ನೀಡುವಂತೆ ನಾವು ವಿದೇಶಾಂಗ ಸಚಿವರನ್ನು ಕಳುಹಿಸುವುದಿಲ್ಲ' ಎಂದು ಹೇಳಿದ್ದರು.

ರಾಷ್ಟ್ರಪತಿಯವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಜನವರಿ 31 ರಂದು ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡ ವೇಳೆ, ರಾಹುಲ್‌ ಈ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.