ADVERTISEMENT

ಕೋವಿಡ್‌ ನಿಯಮಗಳಿಗೆ ಒಳಪಟ್ಟು ಐತಿಹಾಸಿಕ ಪುರಿ ಜಗನ್ನಾಥ ಯಾತ್ರೆ ಆರಂಭ!

ಪಿಟಿಐ
Published 23 ಜೂನ್ 2020, 12:28 IST
Last Updated 23 ಜೂನ್ 2020, 12:28 IST
ಐತಿಹಾಸಿಕ ಪುರಿ ಜಗನ್ನಾಥ ಯಾತ್ರೆ ಮಂಗಳವಾರ ಆರಂಭವಾಗಿದ್ದು, ಭಕ್ತರು ಮತ್ತು ಅರ್ಚಕರು ‘ಪಹಂಡಿ’ ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು
ಐತಿಹಾಸಿಕ ಪುರಿ ಜಗನ್ನಾಥ ಯಾತ್ರೆ ಮಂಗಳವಾರ ಆರಂಭವಾಗಿದ್ದು, ಭಕ್ತರು ಮತ್ತು ಅರ್ಚಕರು ‘ಪಹಂಡಿ’ ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು   

ಪುರಿ (ಒಡಿಶಾ): ಧಾರ್ಮಿಕ ಯಾತ್ರಾ ಸ್ಥಳ ಪುರಿಯಲ್ಲಿ ಮಂಗಳವಾರ ಐತಿಹಾಸಿಕ ಜಗನ್ನಾಥ ರಥ ಯಾತ್ರೆ ಆರಂಭವಾಯಿತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬಿಗಿ ಕಟ್ಟೆಚ್ಚರ ವಹಿಸಿ, ಸೀಮಿತ ಸಂಖ್ಯೆಯಲ್ಲಿ ಭಕ್ತರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಜನದಟ್ಟಣೆ ತಪ್ಪಿಸುವ ಕ್ರಮವಾಗಿ ಪುರಿ ಜಿಲ್ಲೆಯಾದ್ಯಂತ ‘ಕರ್ಫ್ಯೂ’ ಮಾದರಿಯ ‘ಶಟ್‌ಡೌನ್‌’ ನಿರ್ಬಂಧವನ್ನು ಸೋಮವಾರ ರಾತ್ರಿಯಿಂದಲೇ ಜಿಲ್ಲಾಡಳಿತ ಜಾರಿಗೊಳಿಸಿದ್ದು, ಬುಧವಾರ ಮಧ್ಯಾಹ್ನ 2 ಗಂಟೆಯವರೆಗೂ ಜಾರಿಯಲ್ಲಿರುತ್ತದೆ.

ಕಳೆದ ವರ್ಷದ ಜಗನ್ನಾಥ ಯಾತ್ರೆಯಲ್ಲಿ ಸೇರಿದ್ದ ಭಕ್ತ ಸಾಗರ

ಕೊರೊನಾ ಸೋಂಕು ಪಿಡುಗು ಹಿನ್ನೆಲೆಯಲ್ಲಿ ಈ ಮೊದಲು ಪ್ರಸಕ್ತ ವರ್ಷದ ರಥಯಾತ್ರೆಗೆ ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್, ಪರಿಶೀಲನಾ ಅರ್ಜಿಗಳ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು ಪರಿಷ್ಕರಿಸಿ, ಯಾತ್ರೆಗೆ ಅವಕಾಶ ಕಲ್ಪಿಸಿತ್ತು.

ADVERTISEMENT

ತಲಾ 30 ಸದಸ್ಯರಿರುವ ಪೊಲೀಸರ ಸುಮಾರು 50 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪರಿಸ್ಥಿತಿಯ ಮೇಲೆ ಕಣ್ಗಾವಲು ಇಡಲು ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ರಥ ಎಳೆಯುವುದರಲ್ಲಿ ಭಾಗಿಯಾಗಿದ್ದ ಪೊಲೀಸರು ಮತ್ತು ಅರ್ಚಕರನ್ನು ಸೋಮವಾರ ರಾತ್ರಿಯೇ ಕಡ್ಡಾಯವಾಗಿ ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯು ನೆಗೆಟಿವ್ ಬಂದವರಿಗಷ್ಟೇ ಯಾತ್ರೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು.

ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರಾ ದೇವರ ಮೂರ್ತಿಗಳಿಗೆ ಮಂಗಳಾರತಿ, ಮೈಲಂ ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು.

ದೇವರ ಮೂರ್ತಿಗಳನ್ನು ರತ್ನ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿ ದೇವಳದಿಂದ 22 ಮೆಟ್ಟಿಲು ಕೆಳಗಿರುವ ಬೈಸಿ ಪಹಚ ಬಳಿಗೆ ಸಿಂಹದ ಹೆಬ್ಬಾಗಿಲಿನ ಮೂಲಕ ತಂದು ಅಲ್ಲಿ ‘ಪಹಂಡಿ’ ಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರು ಗಂಟೆ ಬಾರಿಸುತ್ತಾ ರಥವನ್ನು ಎಳೆದರು.

ದೇವಳದ ಆಡಳಿತ ಮಂಡಳಿಯ ಗಜಪತಿ ಮಹಾರಾಜ ದಿಬ್ಯಸಿಂಗ್ ದೇವ್ ಅವರು ವಿಶೇಷ ‘ಛೇರಾ ಪನ್ಹಾರಾ’ ನೆರವೇರಿಸುವ ಮೂಲಕ ರಥ ಎಳೆಯುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪಾಧ್ಯಕ್ಷ ಎಂ.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌, ಕೇಂದ್ರ ಸಚಿವ ಅಮಿತ್‌ ಶಾ ಅವರು ಈ ಸಂದರ್ಭದಲ್ಲಿಜನತೆಗೆ ಶುಭಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.