ADVERTISEMENT

ತಗ್ಗಿದ ಯಾತ್ರಿಕರ ಸಂಖ್ಯೆ: ಭಾರತ್‌ ಗೌರವ್‌ ರೈಲು ಟಿಕೆಟ್‌ ದರ ಕಡಿತ ಸಾಧ್ಯತೆ

ಪಿಟಿಐ
Published 30 ನವೆಂಬರ್ 2022, 14:35 IST
Last Updated 30 ನವೆಂಬರ್ 2022, 14:35 IST
ಐಆರ್‌ಸಿಟಿಸಿ
ಐಆರ್‌ಸಿಟಿಸಿ   

ನವದೆಹಲಿ (ಪಿಟಿಐ): ‘ಯಾತ್ರಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದರಿಂದ ಭಾರತ್‌ ಗೌರವ್‌ ವಿಶೇಷ ರೈಲುಗಳ ಪ್ರಯಾಣ ದರವನ್ನು ಶೇ 20 ರಿಂದ 30ರಷ್ಟು ಕಡಿತಗೊಳಿಸಲು ರೈಲ್ವೆ ಇಲಾಖೆ ಚಿಂತಿಸಿದೆ. ಈ ಸಂಬಂಧ ಸದ್ಯದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಮೂಲಗಳು ಬುಧವಾರ ತಿಳಿಸಿವೆ.

ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ವಿಶೇಷ ರೈಲುಗಳ ದರ ಇಳಿಕೆ ಸಂಬಂಧ ಸಲ್ಲಿಸಿದ್ದ ಪ್ರಸ್ತಾವನೆಗೆ ರೈಲ್ವೆ ಮಂಡಳಿಯು ಸಮ್ಮತಿ ಸೂಚಿಸಿದೆ.

‘ಸ್ಲೀಪರ್‌ ಮತ್ತು ಎಸಿ–3 ದರ್ಜೆಯ ಟಿಕೆಟ್‌ ದರಗಳನ್ನು ಕಡಿತ ಮಾಡುವ ವಿಚಾರವಾಗಿ ಐಆರ್‌ಸಿಟಿಸಿ ಶೀಘ್ರವೇ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಪ್ರಸ್ತುತ ನಿಗದಿಪಡಿಸಿರುವ ದರವು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಭಾರತ್‌ ಗೌರವ್‌ ರೈಲುಗಳಿಗಿಂತಲೂ ಭಾರತ್‌ ದರ್ಶನ ರೈಲುಗಳ ದರ ಕಡಿಮೆ ಇರುವುದರಿಂದ ಯಾತ್ರಿಕರು ಆ ರೈಲುಗಳತ್ತ ಮುಖ ಮಾಡಿದ್ದಾರೆ’ ಎಂದೂ ಹೇಳಿವೆ.

ADVERTISEMENT

ಭಾರತ್‌ ಗೌರವ್‌ ವಿಶೇಷ ರೈಲಿನ 18 ದಿನಗಳ ಹವಾನಿಯಂತ್ರಿತ–3 ಟಯರ್‌ ಪ್ಯಾಕೇಜ್‌ಗೆ ₹62 ಸಾವಿರ ದರ ನಿಗದಿ ಮಾಡಲಾಗಿದೆ.

ಯಾತ್ರಿಗಳ ಸಂಖ್ಯೆಯ ಕೊರತೆಯಿಂದಾಗಿ ಈಗಾಗಲೇ ನಿಗದಿಯಾಗಿದ್ದಭಾರತ್‌ ಗೌರವ್‌ ಶ್ರೀ ಜಗನ್ನಾಥ ಯಾತ್ರೆ ಹಾಗೂ ಭಾರತ್‌ ಗೌರವ್‌ ರಾಮಾಯಣ ಸರ್ಕ್ಯೂಟ್‌–2 ರೈಲು ಪ್ರಯಾಣ ಸೇವೆಗಳನ್ನು ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.