
ಚಾಯ್‌ಬಾಸಾ(ಜಾರ್ಖಂಡ್): ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚಾಯ್‌ಬಾಸಾ ರಕ್ತ ನಿಧಿಯ ಮೂವರು ದಾನಿಗಳು ಎಚ್‌ಐವಿ ಪಾಸಿಟಿವ್ ಎಂಬುದು ಪತ್ತೆಯಾಗಿದೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಗುರುವಾರ ತಿಳಿಸಿದ್ದಾರೆ.
2023 ಮತ್ತು 2025ರ ನಡುವೆ ಚಾಯ್‌ಬಾಸಾ ರಕ್ತ ನಿಧಿಯಲ್ಲಿ ಒಟ್ಟಾರೆಯಾಗಿ 259 ಜನರು ರಕ್ತದಾನ ಮಾಡಿದ್ದಾರೆ. ಜಿಲ್ಲಾಡಳಿತವು ಪ್ರತಿಯೊಬ್ಬ ದಾನಿಯನ್ನೂ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ವಾರ ಥಲಸ್ಸೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಬಾಲಕರಿಗೆ ಎಚ್‌ಐವಿ ಪಾಸಿಟಿವ್ ಆಗಿರುವುದು ಪತ್ತೆಯಾದ ನಂತರ ರಕ್ತ ನಿಧಿಯನ್ನು ತನಿಖೆಗೊಳಪಡಿಸಿದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.
ರಕ್ತ ನಿಧಿಯು ತಮ್ಮ ಕುಟುಂಬ ಸದಸ್ಯನಿಗೆ ಎಚ್‌ಐವಿ ಸೋಂಕಿತ ರಕ್ತ ವರ್ಗಾವಣೆ ಮಾಡಿದೆ ಎಂದು ಥಲಸ್ಸೆಮಿಯಾ ರೋಗಿಗಳಲ್ಲಿ ಒಬ್ಬರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
‘ರಕ್ತದಾನ ಮಾಡಿದ 259 ದಾನಿಗಳಲ್ಲಿ 44 ದಾನಿಗಳನ್ನು ಸಂಪರ್ಕಿಸಿದ್ದೇವೆ. ಪರೀಕ್ಷೆಯ ನಂತರ ಅವರಲ್ಲಿ ಮೂವರು ಎಚ್‌ಐವಿ ಪಾಸಿಟಿವ್ ಎಂದು ಕಂಡುಬಂದಿದೆ. ಇದಲ್ಲದೆ, ಒಬ್ಬ ದಾನಿಯ ಕುಟುಂಬದ ಐವರು ಸದಸ್ಯರು ಸಹ ಎಚ್‌ಐವಿ ಪೀಡಿತರಾಗಿದ್ದಾರೆ’ಎಂದು ಸಚಿವರು ತಿಳಿಸಿದ್ದಾರೆ.
ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಾವು ಈ ಬಗ್ಗೆ ಏನನ್ನಾದರೂ ಹೇಳಬಹುದು. ಇದಕ್ಕೆ ಕನಿಷ್ಠ ನಾಲ್ಕು ವಾರ ಬೇಕಾಗಬಹುದು ಎಂದಿದ್ದಾರೆ.
ಎಚ್‌ಐವಿ ಪೀಡಿತ ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ ಬಾಲಕರು ಈ ರಕ್ತನಿಧಿಯಿಂದ ರಕ್ತ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಾದ್ಯಂತ ರಕ್ತನಿಧಿಗಳ ಪರಿಶೀಲನೆಗೆ ಆದೇಶಿಸಿದೆ ಎಂದಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.