ADVERTISEMENT

ಕೊರೋನಾ: ನಾಲ್ವರು ಐಎಎಸ್ ಅಧಿಕಾರಿಗಳನ್ನು ದೆಹಲಿಗೆ ವರ್ಗಾಯಿಸಿದ ಅಮಿತ್ ಶಾ

ಏಜೆನ್ಸೀಸ್
Published 14 ಜೂನ್ 2020, 14:27 IST
Last Updated 14 ಜೂನ್ 2020, 14:27 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಕೊರೊನಾ ಬಿಕ್ಕಟ್ಟು ನಿರ್ವಹಣೆಗಾಗಿ ದೆಹಲಿ ಸರ್ಕಾರಕ್ಕೆ ನೆರವಾಗಲು ನಾಲ್ವರು ಐಎಎಸ್ ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಭಾನುವಾರ ಆದೇಶ ಹೊರಡಿಸಿದೆ.

ಅಂಡಮಾನ್ ಮತ್ತು ನಿಕೋಬಾರ್‌ನಿಂದ ಇಬ್ಬರು, ಅರುಣಾಚಲ ಪ್ರದೇಶದಿಂದ ಇಬ್ಬರು ಐಎಎಸ್ ಅಧಿಕಾರಿಗಳನ್ನು ತಕ್ಷಣ ದೆಹಲಿಗೆ ವರ್ಗಾಯಿಸುವಂತೆ ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಂಡಮಾನ್, ನಿಕೋಬಾರ್‌ನಿಂದ ಅವನೀಶ್ ಕುಮಾರ್, ಮೋನಿಕಾ ಪ್ರಿಯದರ್ಶಿನಿ ಹಾಗೂ ಅರುಣಾಚಲ ಪ್ರದೇಶದಿಂದ ಗೌರವ್ ಸಿಂಗ್ ರಾಜಾವತ್ ಮತ್ತು ವಿಕ್ರಂ ಸಿಂಗ್ ಮಲ್ಲಿಕ್ ಅವರನ್ನು ದೆಹಲಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಿಗೂ ದೆಹಲಿ ಸರ್ಕಾರಕ್ಕೆ ನೆರವಾಗುವಂತೆ ನಿರ್ದೇಶನ ನೀಡಲಾಗಿದೆ.

ADVERTISEMENT

ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ಗೃಹ ಸಚಿವಾಲಯಕ್ಕೆ ಭೇಟಿ ನೀಡಿ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಜೊತೆ ಮಾತುಕತೆ ನಡೆಸಿದ್ದಾರೆ. ಕೋವಿಡ್ ನಿರ್ವಹಣೆಗೆ ಸಂಬಂಧಿಸಿ ನಡೆದ ಈ ಮಾತುಕತೆಯಲ್ಲಿ ದೆಹಲಿ ಪುರಸಭೆಯ ಮೇಯರ್‌ಗಳೂ ಭಾಗವಹಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಸದ್ಯ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 38,958 ತಲುಪಿದ್ದು, 1271 ಜನ ಈವರೆಗೆ ಮೃತಪಟ್ಟಿದ್ದಾರೆ. 14,945 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 22,742 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.