ADVERTISEMENT

ರಾಯ್‌ಬರೇಲಿ, ಅಮೇಠಿ ಯಾರ ಕುಟುಂಬದ ಕ್ಷೇತ್ರಗಳೂ ಅಲ್ಲ: ಅಮಿತ್ ಶಾ

ಪಿಟಿಐ
Published 17 ಮೇ 2024, 13:17 IST
Last Updated 17 ಮೇ 2024, 13:17 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಪಿಟಿಐ

ರಾಯ್‌ಬರೇಲಿ: ರಾಯ್‌ಬರೇಲಿ, ಅಮೇಠಿ ನಮ್ಮ ಕುಟುಂಬದ ಕ್ಷೇತ್ರಗಳು ಎಂದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವು ಯಾವುದೇ ಕುಟುಂಬದ ಕ್ಷೇತ್ರಗಳಲ್ಲ, ಜನರ ಕ್ಷೇತ್ರಗಳು ಎಂದರು.

ADVERTISEMENT

ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರು, ಅಯೋಧ್ಯೆ ಮಂದಿರಕ್ಕೆ ಮತ್ತೆ ಬೀಗ ಜಡಿಯುತ್ತಾರೆ ಎಂದು ಟೀಕಿಸಿದರು.

ಉತ್ತರ ಪ್ರದೇಶದ ಉಂಚಹಾರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೌಲತ್ ಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಇದೇವೇಳೆ, ಉಂಚಹಾರ್‌ನ ಸಮಾಜವಾದಿ ಪಕ್ಷದ ಬಂಡಾಯ ಶಾಸಕ ಮನೋಜ್ ಕುಮಾರ್ ಪಾಂಡೆ ಪಕ್ಷಕ್ಕೆ ಸೇರ್ಪಡೆಯಾದರು.

‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸರಿಯಾಗಿ ಆಗಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಒಂದೊಮ್ಮೆ, ‘ಇಂಡಿ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ರಾಮಮಂದಿರಕ್ಕೆ ಬಾಬರಿ ಮಸೀದಿಯ ಬೀಗ ಜಡಿಯಲಿದ್ದಾರೆ’ಎಂದು ಟೀಕಿಸಿದರು.

‘ಇಂಡಿಯಾ ಬಣವನ್ನು ಕುಟುಂಬ ಮೂಲದ ಮೈತ್ರಿ ಎಂದು ಛೇಡಿಸಿದ ಶಾ, ಲಾಲು ಪ್ರಸಾದ್ ಮಗನನ್ನು ಸಿಎಂ ಮಾಡಲು ಇಚ್ಛಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಸೋದರಳಿಯನನ್ನು ಮುಖ್ಯಮಂತ್ರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ಮಗನನ್ನು ಪ್ರಧಾನಿ ಮಾಡಲು ಇಚ್ಛಿಸುತ್ತಿದ್ದಾರೆ’ ಎಂದರು.

‘ರಾಯ್‌ಬರೇಲಿ ಮತ್ತು ಅಮೇಠಿ ತಮ್ಮ ಕುಟುಂಬದ ಕ್ಷೇತ್ರಗಳು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಆದರೆ, ಈ ಕ್ಷೇತ್ರಗಳು ಯಾವುದೇ ಕುಟುಂಬಕ್ಕೆ ಸೇರಿದದವಲ್ಲ. ಎರಡೂ ಜಿಲ್ಲೆಗಳ ಬಡಯುವಕರಿಗೆ ಸೇರಿದ ಕ್ಷೇತ್ರಗಳು. ಅಮೇಠಿ ಮತ್ತು ರಾಯ್‌ಬರೇಲಿಯ ಯಾವೊಬ್ಬ ಯುವಕನೂ ಸಂಸತ್ತಿಗೆ ಹೋಗಬಹುದು’ ಎಂದಿದ್ದಾರೆ.

ಅಮೇಠಿಯಲ್ಲಿ ಸ್ಮೃತಿ ಇರಾನಿ ಮತ್ತು ರಾಯ್‌ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ಗೆಲ್ಲುವ ಮೂಲಕ ಎರಡೂ ಕ್ಷೇತ್ರಗಳು ಬಿಜೆಪಿ ಕೈಸೇರಲಿವೆ ಎಂದರು.

‘ಕಾಂಗ್ರೆಸ್ ಪಕ್ಷ ಆರ್ಟಿಕಲ್ 370 ಮೇಲೆ ಕುಳಿತಿತ್ತು. ಮೋದಿ ಅದನ್ನು ಅಂತ್ಯಗೊಳಿಸಿದರು. ಕಾಂಗ್ರೆಸ್ ಆರ್ಟಿಕಲ್ 370 ಅನ್ನು ಮರಳಿ ತರುವುದಾಗಿ ಹೇಳುತ್ತಿದೆ’ ಎಂದು ಟೀಕಿಸಿದರು.

23 ವರ್ಷ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಕೆಲಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮೇಲೆ ಯಾವುದೇ ಹಗರಣದ ಆರೋಪವಿಲ್ಲ. ಭ್ರಷ್ಟಾಚಾರಿಗಳನ್ನೆಲೆಲ್ಲ ಮೋದಿ ಜೈಲಿಗೆ ತಳ್ಳಿದ್ದಾರೆ ಎಂದು ಶಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.