ADVERTISEMENT

ಮಸೂದೆಗೆ ಹಿಂದಿ ಹೆಸರು: ಡಿಎಂಕೆ ಆಕ್ಷೇಪ

ಮೂರು ಅಪರಾಧ ಮಸೂದೆಗಳ ಪರಾಮರ್ಶೆ ಆರಂಭ

ಪಿಟಿಐ
Published 24 ಆಗಸ್ಟ್ 2023, 16:11 IST
Last Updated 24 ಆಗಸ್ಟ್ 2023, 16:11 IST
ಸ್ಟಾಲಿನ್‌
ಸ್ಟಾಲಿನ್‌   

ನವದೆಹಲಿ: ಬ್ರಿಟಿಷರ ಆಳ್ವಿಕೆ ವೇಳೆ ದೇಶದಲ್ಲಿ ಜಾರಿಗೆ ತಂದಿದ್ದ ಅಪರಾಧ ಕಾನೂನುಗಳಿಗೆ ಬದಲಾಗಿ ಹೊಸ ಕಾನೂನುಗಳನ್ನು ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ಮೂರು ಮಸೂದೆಗಳ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯಿಂದ ಗುರುವಾರ ಪರಾಮರ್ಶೆ ಆರಂಭವಾಗಿದೆ.

ಇಂಡಿಯನ್ ಪೀನಲ್‌ ಕೋಡ್‌ (ಭಾರತೀಯ ದಂಡ ಸಂಹಿತೆ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಮಸೂದೆ, ಕ್ರಿಮಿನಲ್ ಪ್ರೊಸೀಜರ್ ಆ್ಯಕ್ಟ್‌ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ ಹಾಗೂ ಇಂಡಿಯನ್ ಎವಿಡೆನ್ಸ್‌ ಆ್ಯಕ್ಟ್‌ (ಭಾರತೀಯ ಸಾಕ್ಷ್ಯ ಕಾಯ್ದೆ) ಬದಲಿಗೆ ಭಾರತೀಯ ಸಾಕ್ಷ್ಯ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯವು ಮಂಡಿಸಿದೆ.

ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಡಿಸಿದ್ದ ಈ ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. ಇವುಗಳಲ್ಲಿನ ಪ್ರಮುಖ ಅಂಶಗಳು ಮತ್ತು ಬದಲಾವಣೆ ಬಗ್ಗೆ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಸಮಿತಿಯ ಮುಂದೆ ವಿವರಿಸಿದರು.

ADVERTISEMENT

ಸಭೆಯಲ್ಲಿ ಹಾಜರಿದ್ದ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು, ಮಸೂದೆಗಳಿಗೆ ಹಿಂದಿ ಹೆಸರಿಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ನ್ಯಾಯಾಲಯಗಳಲ್ಲಿ ಕ್ರಿಮಿನಲ್‌ ಪ್ರಕರಣದ ವಿಚಾರಣೆಗಳು ನಡೆಯುತ್ತಿರುತ್ತವೆ. ಹಾಗಾಗಿ, ಸಮಿತಿಯು ಪ್ರತಿಯೊಂದು ರಾಜ್ಯದ ವಕೀಲರ ಸಂಘದ ಸದಸ್ಯರ ಜೊತೆ ಸಮಾಲೋಚಿಸಬೇಕು. ಕಾನೂನಾಸಕ್ತರು, ತಜ್ಞರು, ಸಂಸ್ಥೆಗಳೊಟ್ಟಿಗೆ ಚರ್ಚಿಸಬೇಕೆಂದು ಮಾರನ್‌ ಸಲಹೆ ನೀಡಿದರು. ಇದಕ್ಕೆ ಟಿಎಂಸಿ ಸದಸ್ಯ ಡೆರೆಕ್‌ ಒಬ್ರಿಯಾನ್ ಕೂಡ ಧ್ವನಿಗೂಡಿಸಿದರು ಎಂದು ತಿಳಿಸಿವೆ.

ಶುಕ್ರವಾರ ಮತ್ತು ಶನಿವಾರವೂ ಪರಾಮರ್ಶನಾ ಸಭೆ ಮುಂದುವರಿಯಲಿದೆ. ಮುಂದಿನ ತಿಂಗಳು ಕೂಡ ಎರಡು ದಿನಗಳ ಕಾಲ ಸದಸ್ಯರಿಗೆ ಗೃಹ ಸಚಿವಾಲಯವು ವಿವರಣೆ ನೀಡಲಿದೆ ಎಂದು ತಿಳಿಸಿವೆ.

ಗೃಹ ಸಚಿವಾಲಯದ ವಿಷಯಗಳಿಗೆ ಕುರಿತಂತೆ ರಚಿಸಿರುವ ಈ ಸ್ಥಾಯಿ ಸಮಿತಿಗೆ ಬಿಜೆಪಿ ಸದಸ್ಯ ಬ್ರಿಜ್ ಲಾಲ್ ಅಧ್ಯಕ್ಷರಾಗಿದ್ದಾರೆ. ಮೂರು ತಿಂಗಳೊಳಗೆ ಈ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗಳನ್ನು ಮತ್ತೆ ಮಂಡಿಸಿ ಅನುಮೋದನೆ ಪಡೆಯಲು ಕೇಂದ್ರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.