ADVERTISEMENT

ಭಂಡಾರ ಆಸ್ಪತ್ರೆ ದುರಂತ: 14 ವರ್ಷಗಳ ಬಳಿಕ ಜನಿಸಿದ ಮಗಳನ್ನು ಕಳೆದುಕೊಂಡ ದಂಪತಿ

ಪಿಟಿಐ
Published 11 ಜನವರಿ 2021, 6:14 IST
Last Updated 11 ಜನವರಿ 2021, 6:14 IST
ಬೆಂಕಿ ದುರಂತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಭೇಟಿಯಾದ ಉದ್ಧವ್ ಠಾಕ್ರೆ
ಬೆಂಕಿ ದುರಂತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಭೇಟಿಯಾದ ಉದ್ಧವ್ ಠಾಕ್ರೆ   

ನಾಗ್ಪುರ: ಮಹಾರಾಷ್ಟ್ರದ ಭಂಡಾರ ಆಸ್ಪತ್ರೆಯ ಬೆಂಕಿ ದುರಂತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಭಾನಾರ್ಕರ್ ದಂಪತಿಗೆ 14 ವರ್ಷಗಳ ಬಳಿಕ ಮುದ್ದಾದ ಹೆಣ್ಣು ಮಗಳು ಜನಿಸಿದ್ದಳು. ಇದಕ್ಕೂ ಮುನ್ನ ಮೂರು ಬಾರಿ ಮಗು ಜನಿಸುವ ಮುನ್ನವೇ ಮೃತಪಟ್ಟಿತ್ತು. ಆದರೆ ಈಗ ದಂಪತಿಯು 14 ವರ್ಷಗಳ ಬಳಿಕ ಜನಿಸಿದ ಮಗಳನ್ನು ಆಸ್ಪತ್ರೆ ದುರಂತದಲ್ಲಿ ಕಳೆದುಕೊಂಡಿದ್ದಾರೆ.

ಶನಿವಾರ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಭಾನಾರ್ಕರ್‌ ದಂಪತಿಯ ಮಗಳು ಸೇರಿದಂತೆ ಒಟ್ಟು 10 ನವಜಾತ ಶಿಶುಗಳು ಮೃತಪಟ್ಟಿದೆ.

ADVERTISEMENT

ಹಿರ್ಕನ್ಯಾ ಭಾನಾರ್ಕರ್ ಅವರು ಜನವರಿ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗರ್ಭಾವಸ್ಥೆಯ ಏಳನೇ ತಿಂಗಳಲ್ಲಿ ಮಗು ಹುಟ್ಟಿದ್ದಳು. ಅಲ್ಲದೆ ಮಗು ಕಡಿಮೆ ತೂಕವನ್ನು ಹೊಂದಿದ್ದ ಕಾರಣ, ಮಗುವನ್ನು ನವಜಾತ ಶಿಶು ನಿಗಾ ಘಟಕದಲ್ಲಿ ಇರಿಸಲಾಗಿತ್ತು.

‘ಈ ರೀತಿಯ ಪರಿಸ್ಥಿತಿ ಯಾರಿಗೂ ಎದುರಾಗಬಾರದು. ಮಕ್ಕಳು ಬದುಕಿ, ಆಟವಾಡುತ್ತಿರಬೇಕು’ ಎಂದು ಹಿರ್ಕನ್ಯಾ ಭಾನಾರ್ಕರ್ ಅವರು ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಭಾನುವಾರ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಭೇಟಿಯಾಗಿ ಸಾಂತ್ವನ ನೀಡಿದರು. ಈ ವೇಳೆ ಅವಘಡದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಈ ಬಳಿಕ ಮಾಧ್ಯಮದವರಲ್ಲಿ ಮಾತನಾಡಿದ ಅವರು,‘ ಈ ಘಟನೆ ಮನಸ್ಸಿಗೆ ಅಘಾತವನ್ನು ನೀಡಿದೆ. ನಾನು ಇವತ್ತು ಪೋಷಕರನ್ನು ಭೇಟಿಯಾದೆ. ಅವರಿಗೆ ಸಮಾಧಾನ ಮಾಡಲು ನನ್ನ ಬಳಿ ಯಾವುದೇ ಶಬ್ಧಗಳಿರಲಿಲ್ಲ. ನಾನು ಘಟನಾ ಸ್ಥಳವನ್ನು ಪರಿಶೀಲಿಸಿದ್ದೇನೆ’ ಎಂದರು.

ಠಾಕ್ರೆ ಅವರು ಆಸ್ಪತ್ರೆ ಸಿಬ್ಬಂದಿ ಜತೆಗೂ ಈ ಬಗ್ಗೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.