ADVERTISEMENT

ರಿಯಲ್‌ ಎಸ್ಟೇಟ್‌ ಕಂಪನಿಯಂತಾಗಿವೆ ಆಸ್ಪತ್ರೆಗಳು: ಸುಪ್ರೀಂ ಕೋರ್ಟ್‌ ಅಸಮಾಧಾನ

ಆಸ್ಪತ್ರೆಗಳಿಗೆ ತರಾಟೆ: ನಿಯಮ ಉಲ್ಲಂಘಿಸಿದ ಆಸ್ಪತ್ರೆ ಮುಚ್ಚಿಸಲು ಸುಪ್ರೀಂ ಕೋರ್ಟ್‌ ನಿರ್ದೇಶನ

ಪಿಟಿಐ
Published 19 ಜುಲೈ 2021, 19:41 IST
Last Updated 19 ಜುಲೈ 2021, 19:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ : ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ, ಆಸ್ಪತ್ರೆ ಗಳು ಸಾರ್ವಜನಿಕರ ಸೇವೆಗೆ ಆದ್ಯತೆ ನೀಡುವ ಬದಲು ಬೃಹತ್‌ ರಿಯಲ್‌ ಎಸ್ಟೇಟ್‌ ಕಂಪನಿಗಳಾಗಿ ಬದಲಾಗಿವೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕಟ್ಟಡಗಳ ಬೈಲಾ ಉಲ್ಲಂಘಿಸಿ 2–3 ಕೊಠಡಿಗಳ ಫ್ಲ್ಯಾಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸಿಂಗ್‌ ಹೋಂ, ಆಸ್ಪತ್ರೆಗಳನ್ನು ಮುಚ್ಚಿಸುವಂತೆ ನಿರ್ದೇಶಿಸಿದೆ.

ಬೈಲಾ ಉಲ್ಲಂಘಿಸಿರುವ ಆಸ್ಪತ್ರೆಗಳಿಗೆ, ಅಗ್ನಿಶಾಮಕ ವ್ಯವಸ್ಥೆ ಮಾಡಿಕೊಳ್ಳಲು 2022ರ ಜುಲೈವರೆಗೆ ಅವಕಾಶ ನೀಡಿದ್ದಕ್ಕಾಗಿ ಗುಜರಾತ್‌ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ‘ನಿಯಮ ಉಲ್ಲಂಘಿಸುವವರಿಗೆ ನೀವು (ಗುಜರಾತ್‌ ಸರ್ಕಾರ) ಅವಕಾಶ ಕೊಡುತ್ತ ಹೋದರೆ, ಆ ಆಸ್ಪತ್ರೆಗಳು ಕ್ರಮಕೈಗೊಳ್ಳುವ ತನಕ, ರೋಗಿಗಳು ಸಾಯುತ್ತಲೇ ಇರುತ್ತಾರೆ’ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

‘ಸುಪ್ರೀಂ ಕೋರ್ಟ್‌ ಈ ಬಗ್ಗೆ ಡಿಸೆಂಬರ್‌ನಲ್ಲಿ ನಿರ್ದೇಶನ ನೀಡಿತ್ತು. ಆದಾಗ್ಯೂ, ನೀವು ಅದನ್ನು ಪಾಲಿಸದೇ ಆಸ್ಪತ್ರೆಗಳಿಗೆ ಅವಕಾಶ ವಿಸ್ತರಿಸಿ ಅಧಿಸೂಚನೆ ಹೊರಡಿಸಿದ್ದೇಕೆ’ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಈ ಬಗ್ಗೆ ವಾರದ ಒಳಗಾಗಿ ವಿವರಣೆ ನೀಡುವಂತೆ ಸೂಚಿಸಿತು. ಅಧಿಸೂಚನೆಯನ್ನು ಕೂಡಲೇ ಹಿಂದೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿತು.

‘ವಸತಿ ಪ್ರದೇಶಗಳಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ, ಅಗ್ನಿಶಾಮಕ ವ್ಯವಸ್ಥೆ ಇಲ್ಲದೇ ನಡೆಯುತ್ತಿರುವ ಇಂಥ ಆಸ್ಪತ್ರೆಗಳು ಮುಂದುವರಿಯಲು ನಾವು ಖಂಡಿತ ಅವಕಾಶ ಕೊಡುವುದಿಲ್ಲ. ಅವುಗಳನ್ನು ಕೂಡಲೇ ಮುಚ್ಚಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಹಾಗೂ ಎಂ.ಆರ್‌. ಶಾ ಅವರನ್ನು ಒಳಗೊಂಡ ನ್ಯಾಯಪೀಠ ಸೂಚಿಸಿತು. ಆಪತ್ಕಾಲದಲ್ಲಿ ರೋಗಿಗಳ ನೆರವಿಗೆ ನಿಲ್ಲಬೇಕಾದ ಆಸ್ಪತ್ರೆಗಳು ಹಣ ಮಾಡುವ ಕೇಂದ್ರಗಳಾಗಿವೆ ಎಂದೂ ಅಸಮಾಧಾನ ವ್ಯಕ್ತಪಡಿಸಿತು.

ಹಲವು ರೋಗಿಗಳು ಹಾಗೂ ಶುಶ್ರೂಷಕರ ಸಾವಿಗೆ ಕಾರಣವಾದ, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಳೆದ ವರ್ಷ ಸಂಭವಿಸಿದ ಅಗ್ನಿ ಅವಘಡ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ‘ಅವ್ಯವಸ್ಥೆಯ ಆಗರವಾಗಿರುವ ಇಂಥ ಆಸ್ಪತ್ರೆ– ನರ್ಸಿಂಗ್‌ ಹೋಂಗಳನ್ನು ಮುಚ್ಚಿಸಿ, ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಅಗತ್ಯ ಸೌಕರ್ಯವನ್ನು ಒದಗಿಸಬೇಕು’ ಎಂದು ಹೇಳಿತು.

ಅಧಿಸೂಚನೆಗೆ ಸಂಬಂಧಿಸಿ ವಿವರಣೆ ನೀಡುವುದರ ಜೊತೆಗೆ 2020ರ ಡಿಸೆಂಬರ್‌ನಲ್ಲಿ ನೀಡಿದ ನಿರ್ದೇಶನದ ಅನ್ವಯ, ರಾಜ್ಯ ಸರ್ಕಾರವು ಅಗ್ನಿಶಾಮಕ ಸುರಕ್ಷತೆಗೆ ಸಂಬಂಧಿಸಿದ ಪರಿಶೋಧನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.