ADVERTISEMENT

ಗಣಿಗಾರಿಕೆ ಅಕ್ರಮ: ಗಾಯತ್ರಿ ಪ್ರಜಾಪತಿ ನಿವೇಶನಗಳ ಶೋಧ

ಪಿಟಿಐ
Published 12 ಜೂನ್ 2019, 14:34 IST
Last Updated 12 ಜೂನ್ 2019, 14:34 IST

ನವದೆಹಲಿ: ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರ ಮೂರು ಮನೆಗಳು ಸೇರಿದಂತೆ 22 ಸ್ಥಳಗಳಲ್ಲಿ ಸಿಬಿಐ ಬುಧವಾರ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪತಿ ಅವರಿಗೆ ಸೇರಿದ್ದ ಅಮೇಠಿಯಲ್ಲಿನ ಮೂರು ಮನೆ ಸೇರಿದಂತೆ ಉತ್ತರ ಪ್ರದೇಶ, ದೆಹಲಿಯ 22 ಪ್ರದೇಶಗಳಲ್ಲಿ ಸಿಬಿಐ ತಂಡಗಳು ಶೋಧ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಪ್ರಜಾಪತಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಗಣಿಗಾರಿಕೆ ಗುತ್ತಿಗೆ ನೀಡುವ ಭರವಸೆ ನೀಡಿ, ಮಾಜಿ ಸಚಿವರು ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು.ಈ ಆರೋಪವನ್ನು ಪ್ರಜಾಪತಿ ತಳ್ಳಿಹಾಕಿದ್ದಾರೆ.

ADVERTISEMENT

ಅಖಿಲೇಶ್‌ ಯಾದವ್‌ ಸರ್ಕಾರದಲ್ಲಿ ಗಣಿಗಾರಿಕೆ ಸಚಿವರಾಗಿದ್ದ ಪ್ರಜಾಪತಿ ಅವರು ಸಮಾಜವಾದಿ ಪಕ್ಷದ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದರು.

ಅಕ್ರಮ ಗಣಿಗಾರಿಕೆ ಕುರಿತುಅಲಹಾಬಾದ್‌ ಹೈಕೋರ್ಟ್‌ ನಿರ್ದೇಶನದಂತೆ ತನಿಖೆ ನಡೆಸುತ್ತಿರುವ ಸಿಬಿಐ 2019ರ ಜನವರಿ 2ರಂದು ಮೂರನೇ ಎಫ್‌ಐಆರ್‌ ದಾಖಲಿಸಿದೆ. ಎಫ್‌ಐಆರ್‌ ದಾಖಲಾದ ನಂತರಮೊದಲ ಬಾರಿಗೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.

2012–16ರ ಅವಧಿಯಲ್ಲಿ ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರುಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, ಹಮೀರ್‌ಪುರ್‌ ಜಿಲ್ಲೆಯಲ್ಲಿ ಇ–ಟೆಂಡರ್‌ ಪ್ರಕ್ರಿಯೆ ಉಲ್ಲಂಘಿಸಿ ಗಣಿಗುತ್ತಿಗೆ ನೀಡಲಾಗಿದೆ ಎಂಬ ಆರೋಪವಿದೆ.

ಇದೇ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿ ಬಿ. ಚಂದ್ರಕಲಾ ವಿರುದ್ಧವೂ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.