ADVERTISEMENT

ರಾಜ್ಯವು ಹೆದ್ದಾರಿಯನ್ನು ಹೇಗೆ ನಿರ್ಬಂಧಿಸಬಹುದು: ಸುಪ್ರೀಂ ಕೋರ್ಟ್ ಪ್ರಶ್ನೆ

ಶಂಭು ಗಡಿ ಮುಕ್ತಗೊಳಿಸಿ, ಸಂಚಾರ ನಿಯಂತ್ರಿಸಿ * ಹೆದ್ದಾರಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆರೆಯಿರಿ * ಹರಿಯಾಣ ಸರ್ಕಾರಕ್ಕೆ ಸೂಚನೆ

ಪಿಟಿಐ
Published 12 ಜುಲೈ 2024, 23:52 IST
Last Updated 12 ಜುಲೈ 2024, 23:52 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಅಂಬಾಲಾ ಬಳಿಯ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ಶುಕ್ರವಾರ ಸೂಚಿಸಿರುವ ಸುಪ್ರೀಂ ಕೋರ್ಟ್‌, ಹೆದ್ದಾರಿ ನಿರ್ಬಂಧಿಸುವ ಸರ್ಕಾರದ ಅಧಿಕಾರವನ್ನು ಪ್ರಶ್ನಿಸಿದೆ.

‘ಅಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶದ ನಾಗರಿಕರಾಗಿದ್ದಾರೆ. ಅವರಿಗೆ ಆಹಾರ ಮತ್ತು ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಿ. ಅವರು ಬರುತ್ತಾರೆ, ಘೋಷಣೆಗಳನ್ನು ಕೂಗುತ್ತಾರೆ ಮತ್ತು ಹಿಂತಿರುಗುತ್ತಾರೆ’ ಎಂದು ನ್ಯಾಯಾಲಯ ಹೇಳಿದೆ.

‘ಸಂಚಾರ ನಿಯಂತ್ರಿಸುವುದು ತನ್ನ ಕರ್ತವ್ಯವಾಗಿರುವಾಗ ರಾಜ್ಯ ಸರ್ಕಾರವು ಹೆದ್ದಾರಿಯನ್ನು ಹೇಗೆ ನಿರ್ಬಂಧಿಸಬಹುದು’ ಎಂದು ಅದು ಕೇಳಿದೆ.

ADVERTISEMENT

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಫೆಬ್ರುವರಿ 13ರಿಂದ ಶಂಭು ಗಡಿಯಲ್ಲಿ ಮೊಕ್ಕಾಂ ಹೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ ‘ದೆಹಲಿ ಚಲೊ’ ಘೋಷಿಸಿದ ಬಳಿಕ ಹರಿಯಾಣ ಸರ್ಕಾರ ಅಂಬಾಲ– ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೆಡ್‌ಗಳನ್ನು ಅಳವಡಿಸಿ, ರೈತರ ದೆಹಲಿ ಮೆರವಣಿಗೆಯನ್ನು ತಡೆದಿದೆ.

‘ಏಳು ದಿನಗಳಲ್ಲಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಜುಲೈ 10ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹರಿಯಾಣ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ’ ಎಂದು ಹರಿಯಾಣ ಸರ್ಕಾರದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. 

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಅವರ ಪೀಠವು, ‘ರಾಜ್ಯವು ಹೆದ್ದಾರಿಯನ್ನು ನಿರ್ಬಂಧಿಸಲು ಹೇಗೆ ಸಾಧ್ಯ? ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸುವುದು ಅದರ ಕರ್ತವ್ಯ. ಹೀಗಾಗಿ ರಸ್ತೆಯನ್ನು ಮುಕ್ತಗೊಳಿಸಿ, ಸಂಚಾರ ನಿಯಂತ್ರಿಸಿ’ ಎಂದು ಹರಿಯಾಣ ಸರ್ಕಾರದ ವಕೀಲರಿಗೆ ಹೇಳಿತು.

ಯಾವ ವಿಚಾರಣೆ?:

ಪ್ರತಿಭಟನೆಯಲ್ಲಿ ನಿರತರಾದ ರೈತರು ಮತ್ತು ಹರಿಯಾಣ ಭದ್ರತಾ ಸಿಬ್ಬಂದಿ ನಡುವೆ ಫೆಬ್ರುವರಿ 21ರಂದು ನಡೆದ ಘರ್ಷಣೆಯಲ್ಲಿ ರೈತ ಶುಭಕರನ್‌ ಸಿಂಗ್‌ ಮೃತಪಟ್ಟಿದ್ದರು. ಅವರ ಸಾವಿನ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿಸುವ ಕುರಿತು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಮಾರ್ಚ್‌ 7ರಂದು ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

ಈ ಕುರಿತ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಏಪ್ರಿಲ್‌ 1ರಂದು ನಿರಾಕರಿಸಿತ್ತು.

ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ವಾರದೊಳಗೆ ತೆರವುಗೊಳಿಸುವಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಜುಲೈ 10ರಂದು ತೀರ್ಪು ನೀಡಿತ್ತು. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿತ್ತು.

‘ಮೇಲ್ಮನವಿ ಏಕೆ?’

‘ಅಷ್ಟಕ್ಕೂ ಹೈಕೋರ್ಟ್‌ ಆದೇಶವನ್ನು ಏಕೆ ಪ್ರಶ್ನಿಸಲು ಬಯಸುತ್ತಿದ್ದೀರಿ? ರೈತರು ಈ ದೇಶದ ಪ್ರಜೆಗಳು. ಅವರಿಗೆ ಆಹಾರ ಮತ್ತು ಉತ್ತಮ ವೈದ್ಯಕೀಯ ಸೇವೆ ಒದಗಿಸಿ’ ಎಂದ ಪೀಠವು ‘ನೀವು ರಸ್ತೆಯ ಮೂಲಕ ಪ್ರಯಾಣಿಸುವುದಿಲ್ಲ ಎಂದು ಭಾವಿಸಿದ್ದೇವೆ’ ಎಂದು ಹರಿಯಾಣ ಸರ್ಕಾರದ ವಕೀಲರನ್ನು ಸುಪ್ರೀಂ ಕೋರ್ಟ್‌ ಪೀಠವು ಕೇಳಿತು. ಆಗ ‘ನಾನು ರಸ್ತೆ ಮೂಲಕ ಪ್ರಯಾಣಿಸುತ್ತೇನೆ’ ಎಂದು ವಕೀಲರು ಉತ್ತರಿಸಿದರು. ‘ಹಾಗಾದರೆ ನಿಮಗೂ ಈ ಕಷ್ಟಗಳು ಅನುಭವಕ್ಕೆ ಬಂದಿರಬೇಕಲ್ಲ’ ಎಂದ ಪೀಠವು ಬಾಕಿ ಉಳಿದಿರುವ ವಿಚಾರಗಳಲ್ಲಿ ನಂತರದ ಬೆಳವಣಿಗೆಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.