ADVERTISEMENT

ಬಹುಸಂಖ್ಯಾತರ ಓಲೈಕೆಗೆ ಮುಂದಾದ ಮಮತಾ

ಬಿಜೆಪಿಯನ್ನು ತಡೆಒಡ್ಡಲು ಟಿಎಂಸಿ ನಾಯಕಿಯ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 1:14 IST
Last Updated 4 ಸೆಪ್ಟೆಂಬರ್ 2019, 1:14 IST
   

ಕೋಲ್ಕತ್ತ:ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿತ್ತಿರುವ ಬಿಜೆಪಿಗೆ ಚುನಾವಣಾ ರಾಜಕಾರಣದಲ್ಲಿ ತಡೆಹಾಕಲು ಟಿಎಂಸಿ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದೂಗಳ ಓಲೈಕೆಗೆ ಮುಂದಾಗಿದ್ದಾರೆ.

ರಾಜ್ಯದ ಹಲವೆಡೆ ಭಾರಿ ಪ್ರಭಾವ ಹೊಂದಿರುವ ಸುಮಾರು 28,000 ದುರ್ಗಾ ಪೂಜಾ ಸಮಿತಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ ಅನುದಾನವನ್ನು ಮಮತಾ ಬ್ಯಾನರ್ಜಿ ಹೆಚ್ಚಿಸಿದ್ದಾರೆ.

ಹಿಂದಿನ ವರ್ಷ ಈ ದುರ್ಗಾ ಪೂಜಾ ಸಮಿತಿಗಳ ಮೇಲೆ ಮಮತಾ ಸರ್ಕಾರವು ಕೆಲವು ನಿರ್ಬಂಧಗಳನ್ನು ಹೇರಿತ್ತು. ‘ಇದು ಹಿಂದೂ ವಿರೋಧಿ ನಿಲುವು’ ಎಂದು ಬಿಜೆಪಿ ಆರೋಪಿಸಿತ್ತು. ಈ ಹಣೆಪಟ್ಟಿಯನ್ನು ತೆಗೆದುಹಾಕಲು ಮಮತಾ ಬ್ಯಾನರ್ಜಿ ಪ್ರಯತ್ನಿಸುತ್ತಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ದುರ್ಗಾ ಪೂಜೆಯ ಅವಧಿಯಲ್ಲಿ ಈ ಸಮಿತಿಯು ಬಳಸುವ ವಿದ್ಯುತ್‌ಗೆ ಪಾವತಿ ಮಾಡಬೇಕಿರುವ ಶುಲ್ಕದಲ್ಲಿ ಸರ್ಕಾರವು ಶೇ 25ರಷ್ಟು ವಿನಾಯಿತಿ ಘೋಷಿಸಿದೆ.

ಈ ದುರ್ಗಾ ಪೂಜಾ ಸಮಿತಿಗಳಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ ಎಂಬ ಸುದ್ದಿಗಳಿವೆ. ಈ ವಿಚಾರವನ್ನೂ ಬಳಸಿಕೊಂಡು ಪೂಜಾ ಸಮಿತಿಗಳನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಮಮತಾ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತೂ ಚಾಲ್ತಿಯಲ್ಲಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರು ಸಹ ಈ ವಿಚಾರದಲ್ಲಿ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.

ಕೋಲ್ಕತ್ತಾ ಮಹಾನಗರ ಪಾಲಿಕೆಯ ಚಿತಾಗಾರಗಳಲ್ಲಿರುವ ಪುರೋಹಿತರಿಗೆ ಸರ್ಕಾರದ ವತಿಯಿಂದ ಗೌರವಧನ ಘೋಷಿಸಲಾಗಿದೆ.

ಒಡಿಶಾದ ಪುರಿ ಯಲ್ಲಿರುವ ಜಗನ್ನಾಥ ದೇವಾಲಯದ ಮಾದರಿಯಲ್ಲೇ ರಾಜ್ಯದ ಮೇದಿನಿಪುರ ಜಿಲ್ಲೆಯಲ್ಲಿ ದೇವಾಲಯವೊಂದನ್ನು ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಟಿಎಂಸಿಯು ಈವರೆಗೆ ದಲಿತರು ಮತ್ತು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ನೆಚ್ಚಿಕೊಂಡಿತ್ತು. ಬಿಜೆಪಿಯು ಹಿಂದುತ್ವದ ಹೆಸರಿನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ಗುರಿಯಾಗಿಸಿಕೊಂಡಿದ್ದ ಹಿಂದೂಗಳನ್ನೇ ಮಮತಾ ಸಹ ಚುನಾವಣೆಯ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

***

ಬಿಜೆಪಿಯು ಹಿಂದಿ ಭಾಷೆ ಮತ್ತು ಹಿಂದಿ ಸಂಸ್ಕೃತಿಯನ್ನುಬಂಗಾಳದ ಜನರ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ
- ಟಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.