ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಶಿವಸೇನಾ ವಕ್ತಾರ ಸಂಜಯ್ ರಾವುತ್ ವಿರೋಧ ವ್ಯಕ್ತಪಡಿಸಿದ್ದಾರೆ.
‘ವಿದೇಶಿ ರಾಜಕಾರಣಿಯೊಬ್ಬರು ಭಾರತದ ರಾಜಕೀಯ ನಾಯಕರ ಬಗ್ಗೆ ಅಂತಹ ಅಭಿಪ್ರಾಯ ನೀಡಲಾಗದು. ಅಭಿಪ್ರಾಯ ವ್ಯಕ್ತಪಡಿಸಿದ ನಂತರದ ದೇಶೀಯ ರಾಜಕೀಯ ಪ್ರಹಸನವೂ ಕೆಟ್ಟದಾಗಿದೆ. ಟ್ರಂಪ್ ಕೆಟ್ಟವರೆಂದು ನಾವು ಹೇಳಲಾಗದು. ಒಬಾಮ ಅವರಿಗೆ ನಮ್ಮ ದೇಶದ ಬಗ್ಗೆ ಎಷ್ಟು ತಿಳಿದಿದೆ’ ಎಂದು ರಾವುತ್ ಪ್ರಶ್ನಿಸಿದ್ದಾರೆ.
ಒಬಾಮ ಅವರು ತಮ್ಮ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಕೃತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಉಲ್ಲೇಖಿಸಿದ್ದಾರೆ. ‘ಅಧ್ಯಾಪಕರನ್ನು ಮೆಚ್ಚಿಸಲು ತುದಿಗಾಲಲ್ಲಿ ನಿಂತಿರುವ ಕೋರ್ಸ್ ವರ್ಕ್ ಮುಗಿಸಿದ ವಿದ್ಯಾರ್ಥಿಯೇನೋ ಎಂಬಂತೆ ಅಳುಕು, ಅಪಕ್ವತೆಯನ್ನು ಹೊಂದಿದವರು ರಾಹುಲ್ ಗಾಂಧಿ. ಆದರೆ ಆಳದಲ್ಲಿ ವಿಷಯವನ್ನು ಕರಗತ ಮಾಡಿಕೊಳ್ಳಲು ಬೇಕಾದ ವ್ಯಾಮೋಹವಾಗಲೀ ಸಹಜ ಆಸಕ್ತಿಯಾಗಲೀ ಅವರಲ್ಲಿಲ್ಲ’ ಎಂದು ಒಬಾಮ ಅವರು ಕೃತಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ಆತ್ಮಚರಿತ್ರೆಯ ಕುರಿತು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಯಲ್ಲಿ ಉಲ್ಲೇಖಿಸಲಾಗಿತ್ತು.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಿ ಸಾವಿರಾರು ಸಂದೇಶಗಳು ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.