ADVERTISEMENT

ರಫೇಲ್ ಒಪ್ಪಂದದ ಮಾಹಿತಿ ನೀಡಿ: ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಬೆಲೆ ಮಾಹಿತಿ ಬೇಡ ಎಂದ ಸರ್ವೋಚ್ಚ ನ್ಯಾಯಾಲಯ

ಏಜೆನ್ಸೀಸ್
Published 10 ಅಕ್ಟೋಬರ್ 2018, 7:29 IST
Last Updated 10 ಅಕ್ಟೋಬರ್ 2018, 7:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆಹೇಗೆ ನಿರ್ಧಾರ ಕೈಗೊಳ್ಳಲಾಯಿತು ಎಂಬ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದೇ ತಿಂಗಳ 29ರ ಒಳಗೆ ವಿವರಣೆ ನೀಡುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಇದೇ ತಿಂಗಳ 31ಕ್ಕೆ ನಿಗದಿಪಡಿಸಿದೆ.

‘ಅರ್ಜಿದಾರರು ಮಾಡಿರುವ ವಾದವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಅವರ ವಾದ ತೀರಾ ಅಸಮರ್ಪಕವಾಗಿದೆ. ನಾವು ಸರ್ಕಾರಕ್ಕೆ ನೋಟಿಸ್ ನೀಡುತ್ತಿಲ್ಲ. ದರ ಮತ್ತು ಯುದ್ಧವಿಮಾನದ ತಾಂತ್ರಿಕ ವಿವರಗಳು ಬೇಕಾಗಿಲ್ಲ. ಆದರೆ ಹೇಗೆ ನಿರ್ಧಾರ ಕೈಗೊಳ್ಳಲಾಯಿತು ಎಂಬ ವಿವರ ನೀಡಿ’ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

‘ನಿರ್ಧಾರ ಕೈಗೊಂಡ ಮಾಹಿತಿಯಷ್ಟೇ ನಮಗೆ ಸಾಕು. ಪ್ರಕರಣದ ಸೂಕ್ಷ್ಮತೆಯನ್ನು ನಾವು ಅರಿತುಕೊಂಡಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದರು.

ಫ್ರಾನ್ಸ್‌ನ ಡಸಲ್ಟ್ ವಿಮಾನಯಾನ ಸಂಸ್ಥೆಯಿಂದ 36 ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ₹59 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಅರ್ಜಿದಾರ ಎಂ.ಎಲ್. ಶರ್ಮಾ ವಾದಿಸಿದ್ದಾರೆ. ಆದರೆ, ಈ ಅರ್ಜಿಯು ರಾಜಕೀಯ ಪ್ರೇರಿತ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದಾರೆ.

ರಫೇಲ್‌ ಒಪ್ಪಂದದಲ್ಲಿ ಭಾರತೀಯ ಪಾಲುದಾರನನ್ನಾಗಿ ರಿಲಯನ್ಸ್ ಡಿಫೆನ್ಸ್‌ ಕಂಪೆನಿಯನ್ನು ಪರಿಗಣಿಸಬೇಕು ಎಂದು ಭಾರತ ಸರ್ಕಾರ ಶಿಫಾರಸು ಮಾಡಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಇತ್ತೀಚೆಗೆ ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.