ನವದೆಹಲಿ: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಸೈಯದ್ ಅಸೀಮ್ ಮುನೀರ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭೋಜನ ಕೂಟ ಏರ್ಪಡಿಸಿರುವುದು ಭಾರತದ ರಾಜತಾಂತ್ರಿಕತೆಗೆ ಆದ ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಪಾಕಿಸ್ತಾನದ ಅಥವಾ ಅಲ್ಲಿನ ಸರ್ಕಾರದ ಮುಖ್ಯಸ್ಥರಲ್ಲ. ಅವರು ಅಲ್ಲಿನ ಸೇನಾ ಮುಖ್ಯಸ್ಥರಷ್ಟೇ. ಅವರನ್ನೂ ಟ್ರಂಪ್ ಆಹ್ವಾನಿಸಿ, ಭೋಜನ ಕೂಟ ಏರ್ಪಡಿಸಿ, ಗೌರವಿಸುತ್ತಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಖಂಡಿಸಿದ್ದಾರೆ.
‘ಇದೇ ವ್ಯಕ್ತಿ ನೀಡಿದ್ದ ಪ್ರಚೋದನಕಾರಿ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳಿಂದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು’ ಎಂದು ಅವರು ಹೇಳಿದ್ದಾರೆ.
‘ಅಂಥ ವ್ಯಕ್ತಿಯನ್ನು ಅಮೆರಿಕ ಗೌರವಿಸಿದೆ. ಈ ಬೆಳವಣಿಗೆಯು ಭಾರತದ ರಾಜತಾಂತ್ರಿಕತೆಗೆ ಆದ ದೊಡ್ಡ ಹಿನ್ನಡೆಯಾಗಿದೆ. ಅಲ್ಲದೆ, ವಿದೇಶಿ ನಾಯಕರನ್ನು ಅಪ್ಪುವ ಪ್ರಧಾನಿ ಅವರ ನೀತಿಗೂ ಹಿನ್ನಡೆಯಾದಂತೆ ಆಗಿದೆ’ ಎಂದು ಅವರು ಟೀಕಿಸಿದ್ದಾರೆ.
‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಅರ್ಧಗಂಟೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ.
‘ಟ್ರಂಪ್ ಅವರು, ಮೋದಿ ಮತ್ತು ಮುನೀರ್ ಅವರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಿದ್ದಾರೆ. ಈಗಲೂ ಕೇಂದ್ರ ಸರ್ಕಾರ ಮೌನವಾಗಿದೆ. ಆದರೆ, ಭಾರತದ ಪ್ರಧಾನಿ ಕಚೇರಿಗಾದ ಈ ಅವಮಾನವನ್ನು ವಿರೋಧ ಪಕ್ಷಗಳು ಒಪ್ಪುವುದಿಲ್ಲ’ ಎಂದು ಖೇರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.